ಮೊಸರು ಆರೋಗ್ಯಕ್ಕೆ ಉತ್ತಮವಾದದ್ದು ಎಂಬುದು ಗೊತ್ತಿರುವ ವಿಚಾರವೇ. ಅದರಲ್ಲೂ ನಮ್ಮ ಭಾರತೀಯ ಆಹಾರ ಪದ್ದತಿಯಲ್ಲಿ ಮೊಸರು ಕೂಡ ಒಂದು. ಅನೇಕ ಮನೆಗಳಲ್ಲಿ ಊಟದ ಜೊತೆ ಮೊಸರಿಲ್ಲದೆ ಊಟ ಪರಿಪೂರ್ಣ ಆಗುವುದಿಲ್ಲ.
ಮೊಸರು ಆರೋಗ್ಯಕ್ಕೆ ಉತ್ತಮವಾದ ಅಂಶಗಳನ್ನೊಳಗೊಂಡತೆ ತ್ವಚೆಗೂ ಔಷಧಿಯ ಗುಣಗಳನ್ನು ನೀಡಬಲ್ಲದು. ಹಾಗೆಯೇ ಮೊಸರು ಮುಖಕ್ಕೆ ಹೆಚ್ಚಿನ ಕಾಂತಿ ನೀಡುತ್ತದೆ.
ಜೇನು ಹಾಗೂ ಮೊಸರನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಮೊದಲು ಕ್ಲೆನ್ಸರ್‌ನಿಂದ ಮುಖ ತೊಳೆದು ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ನಂತರ ೨೦ ನಿಮಿಷ ಹಾಗೆ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. ಹೀಗೆ ಮಾಡಿದ್ದಲ್ಲಿ ಮುಖದ ಮೇಲಿನ ಟ್ಯಾನ್ ನಿವಾರಣೆಯಾಗುವುದರ ಜೊತೆಗೆ ಉತ್ತಮವಾದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.
ಮುಖದ ಮೇಲೆ ಮೊಡವೆಗಳ ಸಮಸ್ಯೆ ಎನ್ನುವವರಿಗೆ ಅರಿಶಿನ ಕೂಡ ಉತ್ತಮ ಔಷಧ. ಮೊಸರು ಹಾಗೂ ಅರಿಶಿಣವನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಾಗೂ ಕುತ್ತಿಗೆ ಭಾಗಕ್ಕೆ ಲೇಪನ ಮಾಡಿಕೊಳ್ಳಬೇಕು. ೧೫ ನಿಮಿಷದ ನಂತರ ತಣ್ಣಿರಿನಿಂದ ಮುಖ ತೊಳೆಯುವುದರಿಂದ ಮೊಡವೆ ಸಮಸ್ಯೆ ಕಡಿಮೆ ಮಾಡಬಹುದು. ಜೊತೆಗೆ ಕಪ್ಪು ಕಲೆಗಳು ಕೂಡ ನಿವಾರಣೆಯಾಗುವ ಸಾಧ್ಯತೆ ಇದೆ.
ಇನ್ನು ಒಂದು ಚಮಚ ನಿಂಬೆ ರಸದ ಜೊತೆಗೆ ೨ ಚಮಚ ಮೊಸರನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಮುಖಕ್ಕೆ ಹಚ್ಚುತ್ತಾ ಬನ್ನಿ. ೧೫ ರಿಂದ ೨೦ ನಿಮಿಷದ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಹೀಗೆ ವಾರಕ್ಕೊಮ್ಮೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ಇನ್ನು ಒಂದು ಚಮಚ ಮೊಸರಿನ ಜೊತೆ ಒಂದು ಅಥವಾ ಒಂದುವರೆ ಚಮಚ ಟಮೋಟ ರಸ ಸೇರಿಸಿ ಮಿಶ್ರಣ ಮಾಡಿಕೊಳ್ಳಿ ನಂತರ ಸ್ವಚ್ಛ ಮುಖಕ್ಕೆ ಇದನ್ನು ಲೇಪನ ಮಾಡಿ ಹೀಗೆ ೨೦ ನಿಮಿಷ ಒಣಗಲು ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಬೇಕು. ಹೀಗೆ ಮಾಡುತ್ತಾ ಬಂದರೆ ಕಪ್ಪು ಕಲೆ ಹಾಗೂ ಮೊಡವೆ ಸಮಸ್ಯೆ ಬಗೆ ಹರಿಯುತ್ತದೆ.