ಹಾಲು ಒಡೆದು ಹೋಗುವುದು ಸಾಮಾನ್ಯ ಸಂಗತಿ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಹಾಲು ಒಡೆಯುತ್ತಲೇ ಇರುತ್ತದೆ. ಒಡೆದ ಹಾಲನ್ನು ಬಿಸಾಡುವುದೇ ಹೆಚ್ಚು. ಆದರೆ ಈ ಒಡೆದ ಹಾಲಿನಲ್ಲಿ ಪೋಷಕಾಂಶಗಳು ಹೆಚ್ಚು. ಹಾಗೇ ಅದರಿಂದ ಏನೇನು ಪ್ರಯೋಜನವಿದೆ ಎಂದು ನೋಡೋಣ.
* ಒಡೆದ ಹಾಲಿನ ನೀರಿನಲ್ಲಿ ಪ್ರೊಟೀನುಗಳ ಪ್ರಮಾಣ ಹೆಚ್ಚು. ಈ ನೀರಿನಿಂದ ಸ್ನಾಯುವಿನ ಶಕ್ತಿ ಹೆಚ್ಚಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ.
* ಒಡೆದ ಹಾಲಿನ ನಿಯಮಿತ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.
* ಚಪಾತಿ, ರೊಟ್ಟಿ ಹಿಟ್ಟನ್ನು ಕಲೆಸುವಾಗ ಒಡೆದ ಹಾಲಿನ ನೀರನ್ನು ಬಳಸುವುದರಿಂದ ಹಿಟ್ಟು ಮೃದುವಾಗುವುದಲ್ಲದೆ ರುಚಿ ಕೂಡ ಹೆಚ್ಚಾಗುತ್ತದೆ.
* ಒಡೆದ ಹಾಲಿನ ನೀರಿಗೆ ಕಡಲೆ ಹಿಟ್ಟು, ಅರಿಶಿನ ಮತ್ತು ಗಂಧದ ಪುಡಿ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
* ಒಂದು ಪಾತ್ರೆಗೆ ಒಡೆದ ಹಾಲನ್ನು ಹಾಕಬೇಕು. ಅವಶ್ಯಕತೆಗೆ ತಕ್ಕಷ್ಟು ಸಕ್ಕರೆಯನ್ನು ಹಾಕಬೇಕು. ನೀರು ಆರುವವರೆಗೆ ಬಿಸಿ ಮಾಡಬೇಕು. ಕೊನೆಯಲ್ಲಿ ಉಳಿಯುವ ಕಣಕದಿಂದ ರಸಗುಲ್ಲ ಅಥವಾ ಬರ್ಫಿ ತಯಾರಿಸಬಹುದು.
* ಒಡೆದ ಹಾಲನ್ನು ಚೆನ್ನಾಗಿ ಕುದಿಸಬೇಕು. ನಂತರ ಸ್ವಚ್ಛ ಬಟ್ಟೆ ಒಳಗೆ ಒಡೆದ ಹಾಲನ್ನು ಹಾಕಿ ಬಿಗಿಯಾಗಿ ಕಟ್ಟಬೇಕು. ಕೆಲ ಗಂಟೆಗಳ ಬಳಿಕ ಪನ್ನೀರ್ ಸಿದ್ಧವಾಗಿರುತ್ತದೆ ಇದು ಮಾರುಕಟ್ಟೆಯಲ್ಲಿ ಸಿಗುವ ಪನ್ನೀರ್ ಗಿಂತ ತಾಜಾ ಹಾಗೂ ಮೃದು.
* ಒಡೆದ ಹಾಲನ್ನು ಮೊಸರು ಮಾಡಿ ತಿನ್ನಬಹುದು. ಒಡೆದ ಹಾಲಿಗೆ ಸ್ವಲ್ಪ ಮೊಸರು ಹಾಕಿದರೆ ರುಚಿ ಹೆಚ್ಚುತ್ತದೆ.
* ಸೂಪ್ ಮಾಡ್ತಾ ಇದ್ದರೆ ನೀರಿನ ಬದಲು ಒಡೆದ ಹಾಲಿನ ನೀರನ್ನು ಬಳಸಿದರೆ ರುಚಿ ಹೆಚ್ಚುತ್ತದೆ.