ಆರೋಗ್ಯಕರ ಮತ್ತು ಸುಂದರ ತ್ವಚೆ ಬೇಕು ಅನ್ನೋದು ಎಲ್ಲರ ಆಸೆ. ಚರ್ಮ ಸುಂದರವಾಗಿದ್ದರೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ತ್ವಚೆಯ ಸೌಂದರ್ಯ ಬಾಹ್ಯ ಮಾತ್ರವಲ್ಲ, ಆಂತರಿಕವಾದದ್ದು.
ನಮ್ಮ ದೇಹವು ಆರೋಗ್ಯಕರವಾಗಿದ್ದರೆ ಚರ್ಮವು ಹೆಚ್ಚು ಹೊಳೆಯುತ್ತದೆ. ಚರ್ಮವನ್ನು ಆರೋಗ್ಯಕರವಾಗಿ ಮತ್ತು ನಿರ್ಮಲಗೊಳಿಸಲು ನೀವು ಬಯಸಿದರೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ. ಕೆಲವೊಂದು ನಿರ್ದಿಷ್ಟ ಪದಾರ್ಥಗಳನ್ನು ಸೇವಿಸಿ. ಅವು ಯಾವುವು ಅನ್ನೋದನ್ನು ನೋಡೋಣ.
ಟೊಮೆಟೊ: ಟೊಮೆಟೊಗಳಲ್ಲಿ ಉತ್ಕರ್ಷಣ ನಿರೋಧಕಗಳಿರುತ್ತವೆ. ಲೈಕೋಪೀನ್ ಕೂಡ ಇರುತ್ತದೆ. ಇದು ಚರ್ಮವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ನೀವು ಟೊಮೆಟೋ ಸ್ಮೂಥಿ ಮಾಡಿ ಕುಡಿಯಬಹುದು. ಅಥವಾ ಸಲಾಡ್ ಮತ್ತು ಮೇಲೋಗರಗಳಲ್ಲೂ ಬಳಸಬಹುದು.
ಪಪ್ಪಾಯ: ತ್ವಚೆಯ ಆರೈಕೆಗೆ ಮತ್ತೊಂದು ಉತ್ತಮ ಆಹಾರವೆಂದರೆ ಪಪ್ಪಾಯ ಹಣ್ಣು. ಪಪ್ಪಾಯ ಸೇವನೆಯಿಂದ ನಿಮ್ಮ ತ್ವಚೆ ಮೊಡವೆ ಮುಕ್ತವಾಗಿ ಸ್ವಚ್ಛವಾಗಿರುತ್ತದೆ. ಪಪ್ಪಾಯಿಯಲ್ಲಿರುವ ಪಪೈನ್ ಚರ್ಮದ ಸಂರಕ್ಷಣೆಗೆ ಅತ್ಯಂತ ಅವಶ್ಯಕ. ಇದು ಸತ್ತ ಚರ್ಮದ ಕೋಶಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಪಪ್ಪಾಯ ಸೇವನೆ ಮಾಡುವುದರಿಂದ ನಿಮ್ಮ ಮುಖದ ಕಲೆಗಳನ್ನು ಹೋಗಲಾಡಿಸಬಹುದು.
ಡಾರ್ಕ್ ಚಾಕೊಲೇಟ್: ಕೋಕೋ ಪೌಡರ್ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಕೋಕೋ ಪೌಡರ್‌ನಿಂದ ತಯಾರಿಸುವ ಡಾರ್ಕ್ ಚಾಕೊಲೇಟ್ ನಿಮ್ಮ ಚರ್ಮಕ್ಕೆ ಒಳ್ಳೆಯದು.
ಸೌತೆಕಾಯಿ: ಸೌತೆಕಾಯಿಯಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ. ಹಾಗಾಗಿ ಇದು ಚರ್ಮದ ಸೌಂದರ್ಯಕ್ಕೆ ಹೇಳಿ ಮಾಡಿದಂತಹ ಆಹಾರ. ಇದು ನಿಮ್ಮ ತ್ವಚೆಯನ್ನು ಹೈಡ್ರೀಕರಿಸಿ ತಂಪಾಗಿರಿಸುತ್ತದೆ. ನಿಮ್ಮ ಚರ್ಮವನ್ನು ಸುಕ್ಕುಗಳಿಂದ ರಕ್ಷಿಸುತ್ತದೆ ಮತ್ತು ಚರ್ಮ ಜೋತು ಬೀಳದಂತೆ ಬಿಗಿಯಾಗಿ ಇಡುತ್ತದೆ.