ಹೊಸ ಹೊಸ ತಂತ್ರಜ್ಞಾನಗಳು ನಮ್ಮ ಜೀವನ ಇನ್ನಷ್ಟು ಸುಲಭವಾಗಿಸಿದೆ, ಆದರೆ ಅದರೊಂದಿಗೆ ಹಲವಾರು ಸಮಸ್ಯೆಗಳು ಉದ್ಭವಿಸಿವೆ. ಇವುಗಳಲ್ಲಿ ಒಂದು ಕುತ್ತಿಗೆ ನೋವು. ದಿನವಿಡೀ ಮೊಬೈಲ್ ಅಥವಾ ಲ್ಯಾಪ್ಟಾಪ್ ನೋಡುತ್ತ ಕೆಲಸ ಮಾಡುವುದರಿಂದ ಕುತ್ತಿಗೆಯ ಸ್ನಾಯುಗಳು ಗಟ್ಟಿಯಾಗುತ್ತವೆ. ಕುತ್ತಿಗೆ ನೋವು ಶುರುವಾಗುತ್ತದೆ. ಕೆಲವೊಂದು ಸರಳ ವ್ಯಾಯಾಮಗಳು ಈ ನೋವನ್ನು ಹೋಗಲಾಡಿಸುತ್ತವೆ.
ನೀವು ತಲೆಯ ಹಿಂಭಾಗದಲ್ಲಿ ನೋವು ಅನುಭವಿಸುತ್ತಿದ್ದರೆ, ಕುತ್ತಿಗೆಯನ್ನು ಅತ್ತಿತ್ತ ಚಲಿಸುವಲ್ಲಿ ತೊಂದರೆ ಅಥವಾ ಕುತ್ತಿಗೆಯಲ್ಲಿ ಬಿಗಿತವಿದ್ದರೆ ಇದು ಕುತ್ತಿಗೆ ನೋವಿನ ಲಕ್ಷಣವಾಗಿರಬಹುದು. ಐದೇ ನಿಮಿಷಗಳಲ್ಲಿ ಈ ನೋವಿನಿಂದ ಮುಕ್ತಿ ಪಡೆಯುವುದು ಹೇಗೆ ಅಂತ ನೋಡೋಣ.
ನೆಕ್ ಸ್ಟ್ರೆಚ್ : ನಿಮ್ಮ ಬೆನ್ನನ್ನು ನೇರವಾಗಿ ಇರಿಸಿಕೊಂಡು ಕುಳಿತುಕೊಳ್ಳಿ. ಗಲ್ಲವನ್ನು ಮುಂದಕ್ಕೆ ಚಾಚಿ, 5 ಸೆಕೆಂಡುಗಳ ಕಾಲ ಇದೇ ಪೊಸಿಶನ್ ನಲ್ಲಿರಿ. ಗಲ್ಲವನ್ನು ಹಿಂದಕ್ಕೆ ಚಲಿಸುವಾಗ, ಸಾಮಾನ್ಯ ಸ್ಥಾನದಿಂದ ಹಿಂದಕ್ಕೆ ತೆಗೆದುಕೊಂಡು ಮತ್ತೆ 5 ಸೆಕೆಂಡುಗಳ ಕಾಲ ನಿಲ್ಲಿಸಿ. ಈ ರೀತಿಯಲ್ಲಿ ನೀವು 5 ಬಾರಿ ಮಾಡಬೇಕು.
ನೆಕ್ ರೊಟೇಶನ್ : ಕುತ್ತಿಗೆ ನೋವಿಗೆ ಇದು ಕೂಡ ಪರಿಣಾಮಕಾರಿ ಚಿಕಿತ್ಸೆ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ ಕುಳಿತುಕೊಳ್ಳಿ. ಕುತ್ತಿಗೆಯನ್ನು ಆರಾಮದಾಯಕ ಸ್ಥಿತಿಯಲ್ಲಿ ಇರಿಸಿ ಮತ್ತು ಅದನ್ನು ಒಂದು ಬದಿಗೆ ಬಗ್ಗಿಸಿ, ವೃತ್ತಾಕಾರದಲ್ಲಿ ತಿರುಗಿಸಿ. ಮೊದಲು ನೀವು ಕುತ್ತಿಗೆಯನ್ನು ಹಿಂದಕ್ಕೆ ಚಲಿಸುವಾಗ ತಿರುಗಿಸಲು ಪ್ರಾರಂಭಿಸಿ. ನಂತರ, ಮುಂಭಾಗದಿಂದ ಕುತ್ತಿಗೆಯನ್ನು ತಿರುಗಿಸಲು ಪ್ರಾರಂಭಿಸಿ. ಈ ವ್ಯಾಯಾಮವನ್ನು 5 ಬಾರಿ ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ಮಾಡಿ.
ಶೋಲ್ಡರ್ ಸರ್ಕಲ್ : ಕುತ್ತಿಗೆ ನೋವಿನಿಂದ ಪರಿಹಾರ ಪಡೆಯಲು ಭುಜದ ವ್ಯಾಯಾಮವೂ ಅವಶ್ಯಕ. ಎದ್ದು ನಿಂತು ಭುಜಗಳನ್ನು ಮೊದಲು ಹಿಂಭಾಗದಿಂದ ಮುಂದಕ್ಕೆ ಮತ್ತು ನಂತರ ಮುಂಭಾಗದಿಂದ ಹಿಂದಕ್ಕೆ ತಿರುಗಿಸಿ. ಇದನ್ನು 5 ಬಾರಿ ಮಾಡಿ.
ನೆಕ್ ಟರ್ನ್ : ಕುಳಿತಿರುವಾಗ ಅಥವಾ ನಿಂತಿರುವಾಗ, ಮುಂಭಾಗದ ಕಡೆಗೆ ನೋಡಿ ಮತ್ತು ಗಲ್ಲವನ್ನು ಅದರ ಸ್ಥಳದಲ್ಲಿ ಇರಿಸಿ. ತಲೆಯನ್ನು ಭುಜದ ಕಡೆಗೆ ಒಂದು ಬದಿಗೆ ತಿರುಗಿಸಿ. ಇದರ ನಂತರ, ತಲೆಯನ್ನು ನೇರಗೊಳಿಸುವಾಗ, ಅದನ್ನು ಇನ್ನೊಂದು ಭುಜದ ಕಡೆಗೆ ತಿರುಗಿಸಿ. ಈ ರೀತಿ 5 ಬಾರಿ ಪುನರಾವರ್ತಿಸಿ.
ನೆಕ್ ಟಿಲ್ಟ್ : ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಎದೆಗೆ ಗಲ್ಲವನ್ನು ಸ್ಪರ್ಶಿಸಲು ಪ್ರಯತ್ನಿಸಿ ಮತ್ತು 5 ಸೆಕೆಂಡುಗಳ ಕಾಲ ಇದೇ ಪೊಸಿಶನ್ನಲ್ಲಿರಿ. ನಂತರ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ. ಈ ರೀತಿ 5 ಬಾರಿ ಮಾಡುವುದರಿಂದ ಕತ್ತು ನೋವು ಕಡಿಮೆಯಾಗುತ್ತದೆ.