ಚಳಿಗಾಲ ಬಂತೆಂದರೆ ಚರ್ಮದ ಬಗ್ಗೆ ತುಂಬ ಕಾಳಜಿ ವಹಿಸುತ್ತೇವೆ. ಚರ್ಮ ಒಡೆಯದಂತೆ ಅದಕ್ಕೆ ನಾನಾ ವಿಧದ ಲೋಶನ್ ಗಳನ್ನು ಹಚ್ಚುತ್ತೇವೆ. ಚಳಿಗಾಲದಲ್ಲಿ ಚರ್ಮ ಶುಷ್ಕವಾದಂತೆ ಕೂದಲು ಕೂಡ ಮೃದುತ್ವ ಕಳೆದುಕೊಳ್ಳುತ್ತೆ. ಹಾಗಾಗಿ ಚಳಿಗಾಲದ ತಣ್ಣನೆಯ ಗಾಳಿಯಿಂದ ಕೂದಲನ್ನು ಕೂಡ ಕಾಪಾಡಿಕೊಳ್ಳಬೇಕು. ಚಳಿಯಿಂದ ಕೂದಲ ಸಂರಕ್ಷಣೆ ಮಾಡಲು ಬೇಕಾದ ಕೆಲವು ಸಲಹೆಗಳು ಇಲ್ಲಿದೆ.
ತೆಂಗಿನಕಾಯಿಯ ಎಣ್ಣೆ : ಚಳಿಗಾಲದಲ್ಲಿ ವಾರದಲ್ಲಿ ಒಮ್ಮೆ ಕೂದಲಿಗೆ ಬಿಸಿಯಾದ ತೆಂಗಿನೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ. ಹೀಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸರಾಗವಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ.
ಕೂದಲನ್ನು ಹೆಚ್ಚು ತೊಳೆಯಬೇಡಿ : ಚಳಿಗಾಲದ ತಣ್ಣನೆಯ ಗಾಳಿಯಿಂದಾಗಿ ಕೂದಲು ಒಣಗಿ, ನಿರ್ಜೀವವಾಗಿರುತ್ತದೆ. ಇಂತಹ ಸಮಯದಲ್ಲಿ ಕೂದಲನ್ನು ಹೆಚ್ಚು ತೊಳೆಯಬಾರದು. ಪ್ರತಿನಿತ್ಯ ಕೂದಲನ್ನು ತೊಳೆಯುವುದರಿಂದ ಕೂದಲಿನ ನ್ಯಾಚುರಲ್ ಆಯಿಲ್ ಕಡಿಮೆಯಾಗಿ ಕೂದಲು ಶುಷ್ಕವಾಗುತ್ತದೆ.
ಕಂಡೀಶನರ್ ಬಳಸಿ : ಕೂದಲಿಗೆ ಕಂಡೀಶನರ್ ಗಳನ್ನು ಹಚ್ಚಿ. ಇದರಿಂದ ಕೂದಲಿಗೆ ಹೊಳಪು ಬರುತ್ತದೆ. ಕೂದಲು ಮೃದುವಾಗುತ್ತದೆ. ಕಂಡೀಶನರ್ ಗಳಿಂದ ಕೂದಲು ಡ್ರೈ ಆಗುವುದನ್ನು ತಪ್ಪಿಸಬಹುದು.
ಹೇರ್ ಮಾಸ್ಕ್ ಬಳಸಿ : ಚಳಿಗಾಲದಲ್ಲಿ ಕೂದಲು ಒಣಗುವುದನ್ನು ತಪ್ಪಿಸಲು ಮನೆಯಲ್ಲಿಯೇ ಹೇರ್ ಮಾಸ್ಕ್ ತಯಾರಿಸಿ ಬಳಸಬೇಕು. ಇದರಿಂದ ಕೂದಲನ್ನು ಗಾಳಿ, ಧೂಳು, ಹೊಗೆ ಇವುಗಳಿಂದ ರಕ್ಷಿಸಬಹುದು.