ಆರೋಗ್ಯಕರ ದೇಹವನ್ನು ಪಡೆಯಬೇಕು ಅಂದರೆ ಬೆಳಗ್ಗಿನ ಉಪಹಾರದ ಕಡೆಯೂ ಸೂಕ್ತ ಗಮನ ಹರಿಸುವುದು ಅತ್ಯಗತ್ಯವಾಗಿದೆ. ಆದರೆ ಅನೇಕರಿಗೆ ಕೆಲಸಕ್ಕೆ ಹೋಗುವ ತರಾತುರಿ, ಮಕ್ಕಳನ್ನು ಶಾಲೆಗೆ ಕಳುಹಿಸುವ ಒತ್ತಡದಿಂದಾಗಿ ಉಪಹಾರ ಸೇವಿಸಲು ಸಾಧ್ಯವೇ ಆಗೋದಿಲ್ಲ. ಇಂತಹ ಸಂದರ್ಭದಲ್ಲಿ ಅನೇಕರು ಬಾಳೆ ಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದುಂಟು. ಈ ರೀತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವಿಸೋದು ಎಷ್ಟು ಸೇಫ್ ಎಂದು ಎಂದಾದರೂ ಯೋಚಿಸಿದ್ದೀರೇ..? ಇಲ್ಲ ಎಂದಾದಲ್ಲಿ ಈ ಸ್ಟೋರಿಯನ್ನು ನೀವು ಓದಲೇಬೇಕು.
ರಾತ್ರಿ ಗಂಟೆಗಟ್ಟಲೇ ನಿದ್ದೆ ಮಾಡಿ ಬೆಳಗ್ಗೆ ಏಳುವ ನೀವು ಏನನ್ನು ಸೇವಿಸುತ್ತೀರಾ ಅನ್ನೋದು ನಿಮ್ಮ ಆರೋಗ್ಯವನ್ನು ರಕ್ಷಿಸಲೂಬಹುದು. ಹಾಳುಗೆಡವಲೂಬಹುದು. ಸುಲಭವಾಗಿ ಸಿಗುತ್ತೆ ಎಂಬ ಕಾರಣಕ್ಕೆ ಅನೇಕರು ಬೆಳಗ್ಗೆ ಬಾಳೆಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದು ಕೂಡ ಹೌದು.
ಬಾಳೆಹಣ್ಣನ್ನು ತಿನ್ನಬೇಕು ಎನಿಸಿದ್ರೆ ಸಾಕು ಅದನ್ನು ಹುಡುಕೋದು ಕಷ್ಟದ ಕೆಲಸವೇ ಅಲ್ಲ. ಒಂದು ವೇಳೆ ನೀವು ಫಿಟ್ನೆಸ್ ಪ್ರಿಯರಾಗಿದ್ದು ಬೆಳಗ್ಗಿನ ಉಪಹಾರ ತಯಾರಿಸುವ ವಿಚಾರದಲ್ಲಿ ಸೋಂಬೇರಿಗಳಾಗಿದ್ದರೆ ಬಾಳೆಹಣ್ಣು ನಿಮಗೆ ಉತ್ತಮ ಆಯ್ಕೆಯಾಗಿದೆ. ಬಾಳೆಹಣ್ಣಿನಲ್ಲಿ ಅಗಾಧ ಪ್ರಮಾಣದಲ್ಲಿ ಫೈಬರ್, ಪೊಟ್ಯಾಷಿಯಂ, ಮ್ಯಾಗ್ನಿಷೀಯಂ ಅಂಶವಿದೆ. ಇದರಿಂದ ನಿಮ್ಮ ಜೀವ ನಿರೋಧ ಶಕ್ತಿ ಉತ್ತಮ ಆಗೋದ್ರ ಜೊತೆ ಜೊತೆಗೆ ಮೂಳೆಗಳೂ ಬಲಿಷ್ಠವಾಗುತ್ತದೆ.
ಅಲ್ಲದೇ ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ, ವಿಟಮಿನ್ ಬಿ, ವಿಟಮಿನ್ ಬಿ 6 ಇದೆ. ಬಾಳೆಹಣ್ಣಿನಲ್ಲಿರುವ ಸಿಹಿ ರುಚಿಯು ನಿಮಗೆ ಹೆಚ್ಚಿನ ಎನರ್ಜಿಯನ್ನು ನೀಡುತ್ತೆ. ಆದರೆ ಯಾವುದೇ ಕಾರಣಕ್ಕೂ ಬಾಳೆ ಹಣ್ಣೊಂದನ್ನೇ ನೀವು ಉಪಹಾರದಲ್ಲಿ ಸೇವನೆ ಮಾಡುವಂತಿಲ್ಲ..!
ಬಾಳೆಹಣ್ಣಿನಲ್ಲಿ ಅಗಾಧ ಪ್ರಮಾಣದಲ್ಲಿ ಪೋಷಕಾಂಶ ಅಡಗಿದೆ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ಆದರೆ ಇದರಲ್ಲಿರುವ ಸಕ್ಕರೆ ಅಂಶ ಮಧುಮೇಹಿಗಳಿಗೆ ಒಳ್ಳೆಯದಲ್ಲ. ಅಲ್ಲದೇ ಬಾಳೆಹಣ್ಣಿನಿಂದ ದೇಹಕ್ಕೆ ಸಿಕ್ಕ ಶಕ್ತಿಯು ಕೆಲವೇ ಸಮಯಗಳಲ್ಲಿ ಕರಗಿಬಿಡುತ್ತದೆ. ಇದೇ ಕಾರಣಕ್ಕೆ ನೀವು ಬಾಳೆ ಹಣ್ಣನ್ನು ಓಟ್ಸ್, ಇತರೆ ಹಣ್ಣುಗಳೊಂದಿಗೆ ಸೇವಿಸುವುದು ಹೆಚ್ಚು ಸೂಕ್ತ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಅಲ್ಲದೇ ಬಾಳೆಹಣ್ಣಿನಲ್ಲಿ ಮ್ಯಾಗ್ನೆಷಿಯಂ ಅತಿಯಾದ ಪ್ರಮಾಣದಲ್ಲಿದೆ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದ್ರೆ ಅದು ದೇಹದ ಜೀರ್ಣ ಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.