ದೇವರ ನಾಡು ಎಂದು ಕರೆಸಿಕೊಂಡಿರುವ ಕೇರಳದಲ್ಲಿ ಹಲವು ಪ್ರಸಿದ್ದ ದೇವಸ್ಥಾನಗಳಿವೆ. ಇದೇ ರೀತಿ ಕರ್ನಾಟಕದ ನೆರೆಯ ಜಿಲ್ಲೆ ಆಗಿರುವ ಕೇರಳದ ಕಾಸರಗೋಡಿನಲ್ಲಿ ಕಾರಣಿಕವಾದ ದೇವಸ್ಥಾನವೊಂದಿದೆ. ಈ ಪ್ರಸಿದ್ಧ ದೇವಾಲಯದಲ್ಲಿರುವ ಕೆರೆಯಲ್ಲಿ ಪುಣ್ಯ ಸ್ನಾನ ಮಾಡಿದ್ರೆ ಸಾಕು ಎಂಥಹದ್ದೇ ಚರ್ಮ ರೋಗವಿರಲಿ ವಾಸಿಯಾಗುತ್ತದೆ. ಅದೆಷ್ಟೋ ಕಡೆಗಳಿಗೆ ತೆರಳಿ ಚಿಕಿತ್ಸೆ ಪಡೆದು ಯಾವುದೇ ಪ್ರಯೋಜನವಾಗದ ಮಂದಿ ಈ ದೇವಾಲಯಕ್ಕೆ ಆಗಮಿಸಿ, ಪ್ರಾರ್ಥನೆ ಸಲ್ಲಿಸಿ, ಕಲ್ಯಾಣಿಯಲ್ಲಿ ಮಿಂದೆದ್ದು ಚರ್ಮರೋಗದಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ಯಾವುದು ಆ ದೇವಸ್ಥಾನ, ಚರ್ಮರೋಗ ಕಳೆಯುವ ಆ ದೇವಸ್ಥಾನವೆಲ್ಲಿದೆ ಎಂದು ಹೇಳ್ತಿವಿ ಈ ಸ್ಟೋರಿಯಲ್ಲಿ.
ಹೌದು..ದಕ್ಷಿಣಕನ್ನಡ ಜಿಲ್ಲೆಯ ನೆರೆಯ ಜಿಲ್ಲೆ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯಲ್ಲಿದೆ ಈ ಕಾರಣಿಕ ಮುಜಂಗಾವು ಎಂಬ ಹೆಸರಿನ ದೇವಸ್ಥಾನ. ಈ ದೇವಸ್ಥಾನದಲ್ಲಿ ಪಾರ್ಥಸಾರಥಿ ಹೆಸರಿನಿಂದ ಭಗವಾನ್ ಶ್ರೀ ಕೃಷ್ಣನನ್ನು ಆರಾಧಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಚರ್ಮ ರೋಗದ ಪರಿಹಾರಕ್ಕಾಗಿಯೇ ಬರುತ್ತಾರೆ. ಚರ್ಮರೋಗವಿದ್ದಾಗ ದೇವಸ್ಥಾನಕ್ಕೆ ಆಗಮಿಸಿ ದೇವರ ಮುಂದೆ ಭಕ್ತಿಯಿಂದ ಬೇಡಿಕೊಂಡು ಹರಕೆ ಹೇಳಿಕೊಳ್ಳಬೇಕು. ಇಲ್ಲಿ ಬರುವ ಭಕ್ತರ ಚರ್ಮರೋಗ ಕಡಿಮೆಯಾಗೋಕೆ ಇಲ್ಲಿನ ಕೆರೆಯೇ ಕಾರಣ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಹೀಗಾಗಿ ದೇವರ ಮುಂದೆ ನಿಂತು ಹರಕೆ ಕಟ್ಟಿಕೊಳ್ಳುವ ಭಕ್ತರು ಇಲ್ಲಿನ ಕೆರೆಯಲ್ಲಿ ಸ್ನಾನ ಮಾಡುತ್ತಾರೆ. ಈ ಕೆರೆಯಲ್ಲಿ ಪುಟ್ಟ ಪುಟ್ಟ ಮೀನುಗಳಿದ್ದು, ಹರಕೆ ಹೇಳಿಕೊಳ್ಳುವ ಭಕ್ತರು ಮೀನುಗಳಿಗೆ ದೇವಸ್ಥಾನದಿಂದ ನೀಡಲಾಗುವ ಅಕ್ಕಿ ಹಾಗೂ ಹುರುಳಿಯನ್ನು ನೀಡುತ್ತಾರೆ. ಕೆರೆಗೆ ಸುತ್ತು ಬರುತ್ತಾ ಕೆರೆಗೆ ಹುರುಳಿ, ಅಕ್ಕಿ ಹಾಕುವ ಮೂಲಕ ಪ್ರದಕ್ಷಿಣೆ ಮುಗಿಸಿ ಕೆರೆಯಲ್ಲಿ ಮಿಂದೆದ್ದು ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ.
ಇನ್ನು ಈ ಮುಜಂಗಾವು ಕೆರೆಯಲ್ಲಿ ಮಿಂದೆದ್ದರೆ ಚರ್ಮರೋಗಗಳು ಕಡಿಮೆಯಾಗುತ್ತದೆ ಅನ್ನೋದಕ್ಕೆ ಹಿನ್ನಲೆಯೂ ಇದೆ. ತಲಕಾವೇರಿಯಿಂದಲೇ ಈ ಕಲ್ಯಾಣಿಗೆ ನೀರು ಬರುತ್ತೆ ಅನ್ನೋದು ಭಕ್ತರ ನಂಬಿಕೆ. ವರ್ಷಕ್ಕೆ ಒಂದು ಬಾರಿ ಕಾವೇರಿ ಸಂಕ್ರಮಣದಂದು ಇಲ್ಲಿಗೆ ಕಾವೇರಿ ಗುಪ್ತಗಾಮಿನಿಯಾಗಿ ಹರಿದು ಬರುತ್ತಾಳೆ ಎನ್ನೋದು ಪ್ರತೀತಿ. ಹೀಗಾಗಿ ಔಷಧೀಯ ಗುಣಗಳಿರುವ ಕೆರೆಯ ನೀರಿನಿಂದ ಚರ್ಮರೋಗಗಳು ಕಡಿಮೆಯಾಗುತ್ತವೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಮುಜಂಗಾವು ದೇವಸ್ಥಾನದ ಕಾರಣಿಕ ಶಕ್ತಿಗೆ ಭಕ್ತ ಜನ ಶಿರ ಬಾಗಿರುವುದು ಮಾತ್ರ ಸುಳ್ಳಲ್ಲ.