ಶ್ರೀಕೃಷ್ಣ ಬಾಲ್ಯವನ್ನು ಕಳೆದ ಮಥುರಾ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀಕೃಷ್ಣನ ನೆಲೆಯಾಗಿರುವ ಮಥುರಾಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ.
ಉತ್ತರ ಪ್ರದೇಶದ ಯಮುನಾ ನದಿ ದಡದಲ್ಲಿರುವ ಮಥುರಾ, ಆಗ್ರಾದಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿದೆ. ದೇಶದ ಪ್ರಮುಖ ನಗರಗಳಿಂದ ರೈಲು ಸಂಚಾರವಿದೆ. ಸುಮಾರು 60 ಕಿಲೋ ಮೀಟರ್ ದೂರದಲ್ಲಿ ವಿಮಾನ ನಿಲ್ದಾಣವಿದೆ. ಆಗ್ರಾದಿಂದ ಟ್ಯಾಕ್ಸಿ, ಬಸ್ ಸೌಲಭ್ಯವಿದೆ. 8 ನೇ ಶತಮಾನದವರೆಗೂ ಮಥುರಾ ಬೌದ್ಧ ಧರ್ಮದ ನೆಲೆಯಾಗಿತ್ತು. ಇಲ್ಲಿ ಅನೇಕ ಮಂದಿರಗಳಿದ್ದು, ನೋಡಬಹುದಾದ ಹಲವಾರು ಸ್ಥಳಗಳಿವೆ. ಆಧ್ಯಾತ್ಮ ಸಾಧಕರಿಗಾಗಿ ಮಂದಿರ, ಆಶ್ರಮಗಳಿವೆ.
ಅಲ್ಲದೇ, ವಿಶ್ರಾಮ ಘಾಟ್ ನೋಡಬಹುದಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಕಂಸನನ್ನು ಕೊಂದ ಶ್ರೀಕೃಷ್ಣ ವಿಶ್ರಾಂತಿ ಪಡೆದುಕೊಂಡಿದ್ದನೆಂದು ಹೇಳಲಾಗುತ್ತದೆ. ದ್ವಾರಕಾಧೀಶ ಮಂದಿರ ಮಥುರಾದ ಹೃದಯಭಾಗದಲ್ಲಿದೆ. ದೀಪಾವಳಿ, ಶ್ರೀಕೃಷ್ಣ ಜನ್ಮಾಷ್ಟಮಿ ಮೊದಲಾದ ದಿನಗಳಂದು ಇಲ್ಲಿ ಉತ್ಸವಗಳು ನಡೆಯುತ್ತವೆ. ಮಥುರಾ-ಬೃಂದಾವನ ಮಾರ್ಗದ ಗೀತಾ ಮಂದಿರ ಕೂಡ ಗಮನ ಸೆಳೆಯುತ್ತದೆ. ಮಥುರಾದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಬಾಬಾ ಮಂದಿರ ಅಮೃತಶಿಲೆಯಿಂದ ನಿರ್ಮಾಣವಾಗಿದ್ದು, ವಿಶಿಷ್ಟ ವಾಸ್ತುಶಿಲ್ಪಕಲೆಗೆ ಹೆಸರಾಗಿದೆ.
ಮಥುರಾದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಬೃಂದಾವನದಲ್ಲಿ ಶ್ರೀಕೃಷ್ಣ ಬಾಲ್ಯವನ್ನು ಕಳೆದನೆಂದು ಹೇಳಲಾಗುತ್ತದೆ. ಇಲ್ಲಿ ಹಲವಾರು ದೇವಾಲಯಗಳು ಉದ್ಯಾನಗಳು ಇವೆ. ಗೋವರ್ಧನ ಗಿರಿ ಮಥುರಾದಿಂದ 23 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಭೇಟಿ ಕೊಡುತ್ತಾರೆ. ಇಲ್ಲಿ ಇನ್ನೂ ಹಲವು ನೋಡಬಹುದಾದ ಸ್ಥಳಗಳಿದ್ದು, ಮಾಹಿತಿ ಪಡೆದುಕೊಂಡು ಮಥುರಾ ದರ್ಶನ ಮಾಡಿಬನ್ನಿ.