ಕೊಬ್ಬು ಅಥವಾ ಬೊಜ್ಜು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇತ್ತೀಚಿಗೆ ಒಬೆಸಿಟಿಯಿಂದ ಬಳಲುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ.
ಒಬೆಸಿಟಿ ಪರಿಹಾರವೇ ಇಲ್ಲದ ಖಾಯಿಲೆಯಲ್ಲ. ಬೊಜ್ಜು ಬರದಂತೆ ದೇಹವನ್ನು ಕಾಪಾಡಿಕೊಳ್ಳೋದು ಹೇಗೆ ಅನ್ನೋದನ್ನು ನಾವ್ ಹೇಳ್ತೀವಿ.
ಕೊಬ್ಬಿನ ಪದಾರ್ಥಗಳಿಂದ ದೂರವಿರಿ : ಕಾರ್ಬೊನೇಟೆಡ್ ಪಾನೀಯಗಳು, ಸಂಸ್ಕರಿಸಿದ ಸಕ್ಕರೆ, ಕೃತಕ ಸಿಹಿ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸಬೇಡಿ. ಅವು ರುಚಿಯಾಗಿದ್ದರೂ ಆರೋಗ್ಯ ಸ್ನೇಹಿಯಲ್ಲ.
ಬೆಳಗಿನ ತಿಂಡಿಯನ್ನು ತಪ್ಪಿಸಬೇಡಿ : ಬೆಳಗ್ಗೆ ತಿಂಡಿ ನಿಮ್ಮ ಇಡೀ ದಿನದ ಅತ್ಯಂತ ಪ್ರಮುಖ ಆಹಾರ. ಬೆಳಗ್ಗೆ ತಿಂಡಿ ತಿನ್ನದೇ ಇದ್ರೆ ನಿಮ್ಮಲ್ಲಿ ಭಯಂಕರ ಹಸಿವು ಕಾಣಿಸಿಕೊಳ್ಳುತ್ತದೆ, ಇದರಿಂದ ತಿನ್ನುವ ಪ್ರಮಾಣ ಹೆಚ್ಚಾಗುತ್ತದೆ.
ಸೇವಿಸುವ ಪಾನೀಯಗಳ ಬಗ್ಗೆ ಗಮನವಿರಲಿ : ನಿಮ್ಮ ದೇಹದಲ್ಲಿ ಕೊಬ್ಬಿನ ಸಂಗ್ರಹ ನಿಯಂತ್ರಿಸಲು ಮತ್ತು ತೂಕ ಕಳೆದುಕೊಳ್ಳಲು ಗ್ರೀನ್ ಟೀ, ದಾಲ್ಚಿನಿ ಚಹಾ ಮತ್ತು ಶುಂಠಿ ಚಹಾ ಸಹಕಾರಿ. ಅದಕ್ಕೆ ಸ್ವಲ್ಪ ತ್ರಿಫಲಾ ಪುಡಿ ಸೇರಿಸಿಕೊಂಡು ಕುಡಿಯಿರಿ. ಅದು ನಿಮ್ಮ ಜೀರ್ಣಶಕ್ತಿ ಸರಿಪಡಿಸಿ ತೂಕ ಕಡಿಮೆ ಮಾಡುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ನೀವು ಕಡಿಮೆ ತಿನ್ನಬಹುದು. ಅಷ್ಟೇ ಅಲ್ಲ ನಿಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿ ಶುದ್ಧೀಕರಿಸುತ್ತದೆ.
ನಿಮ್ಮ ಅಡುಗೆ ಮನೆಗೆ ಡಯಟ್ ಮೇಕ್ ಓವರ್ ಇರಲಿ : ಜಂಕ್ ಫುಡ್ ಸೇವನೆ ಬೇಡ. ತರಕಾರಿ, ಹಣ್ಣು, ಧಾನ್ಯಗಳು, ಕಡಿಮೆ ಕ್ಯಾಲೋರಿ ಇರುವ ಪದಾರ್ಥಗಳನ್ನೇ ಬಳಸಿ. ನಿಮ್ಮ ಸಲಾಡ್ ಹೆಲ್ತಿ ಹಾಗೂ ಡೈಜೆಸ್ಟಿವ್ ಆಗಿರಬೇಕಂದ್ರೆ ನಾಲ್ಕು ಹನಿ ನಿಂಬೆರಸ ಹಾಕಿ.
ಅಧಿಕ ವ್ಯಾಯಾಮ, ತೂಕ ಇಳಿಕೆ : ಚಟುವಟಿಕೆಯಿಂದ ಕೂಡಿದ ಜೀವನ ಶೈಲಿಯಿದ್ರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾವಾಗಲೂ ಲಿಫ್ಟ್ ಬಳಸಬೇಡಿ, ಮೆಟ್ಟಿಲುಗಳನ್ನು ಹತ್ತಿ ಇಳಿಯಿರಿ. ಕೆಲಸದ ನಡುವೆ ಆಗಾಗ ವಾಕ್ ಮಾಡುತ್ತಿರಿ. ಸೈಕ್ಲಿಂಗ್, ವಾಕಿಂಗ್ ರೂಢಿಸಿಕೊಳ್ಳಿ.
ಆಹಾರದ ಪ್ರಮಾಣ ಕಡಿಮೆ ಮಾಡಿ, ಚೆನ್ನಾಗಿ ಜಗಿದು ತಿನ್ನಿ : ಆಹಾರವನ್ನು ಜಾಸ್ತಿ ಪ್ರಮಾಣದಲ್ಲಿ ಸೇವಿಸಬೇಡಿ, ಕ್ಯಾಲೋರಿ ಕಡಿಮೆ ಮಾಡಿ. ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತ ಬನ್ನಿ. ಜೊತೆಗೆ ಚೆನ್ನಾಗಿ ಜಗಿದು ತಿನ್ನುವುದನ್ನು ರೂಢಿಸಿಕೊಳ್ಳಿ. ಇದ್ರಿಂದ ತೂಕ ಕಡಿಮೆಯಾಗುತ್ತದೆ. ಜಗಿದು ತಿನ್ನುವುದರಿಂದ ಚೆನ್ನಾಗಿ ಜೀರ್ಣವಾಗುತ್ತದೆ.
ನಿಮ್ಮ ಊಟವನ್ನು ನೀವೇ ತಯಾರಿಸಿಕೊಳ್ಳಿ : ಹೊರಗಡೆ ತಿಂದ್ರೆ ನಿಮ್ಮ ಜೇಬಿಗೂ ಕತ್ತರಿ ಜೊತೆಗೆ ಅಧಿಕ ಕ್ಯಾಲೋರಿ ಹೊಟ್ಟೆ ಸೇರುತ್ತದೆ. ಹಾಗಾಗಿ ಆದಷ್ಟು ಮನೆಯಲ್ಲೇ ಮಾಡಿದ ಫ್ರೆಶ್ ಊಟ ಬೆಸ್ಟ್.