ದೇವಾಲಯಗಳ ನಗರಿ ಎಂದು ಪ್ರಸಿದ್ಧಿ ಪಡೆದಿರುವ ಉಡುಪಿಯಲ್ಲಿ ಹೆಜ್ಜೆಗೊಂದು ದೇವಾಲಯವಿದೆ. ಆದರೂ ಸಹಿತ ಹೆಚ್ಚಿನ ಮಂದಿಗೆ ಉಡುಪಿ ಅಂದಾಕ್ಷಣ ತಕ್ಷಣ ನೆನಪಿಗೆ ಬರೋದು ಶ್ರೀ ಕೃಷ್ಣ ಮಠ.
ಇಲ್ಲಿರುವ ಕೃಷ್ಣನ ದೇವಾಲಯವನ್ನೇ ಕೃಷ್ಣ ಮಠ ಎಂದು ಕರೆಯಲಾಗುತ್ತೆ. ಇಲ್ಲಿನ ಕೃಷ್ಣನ ಪ್ರತಿಮೆಯನ್ನು ಮಧ್ವಾಚಾರ್ಯರು ಸ್ಥಾಪಿಸಿದರು ಎಂದು ನಂಬಲಾಗಿದೆ. ದ್ವಾರಕೆಯಿಂದ ಸ್ವತಃ ಕೃಷ್ಣನೆ ಇಲ್ಲಿ ಆಗಮಿಸಿರುವನೆಂದು, ದರುಶನ ಕೋರಿ ಬರುವ ಎಲ್ಲ ಭಕ್ತರನ್ನು ಹರಸುವವನೆಂದು ನಂಬಲಾಗಿದ್ದು ದಕ್ಷಿಣ ಭಾರತದ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕೃಷ್ಣನ ಭಕ್ತರು ಉಡುಪಿಗೆ ಭೇಟಿ ನೀಡುತ್ತಾರೆ.
ಕೃಷ್ಣ ಮಠದ ಹೊರತಾಗಿ ಇತರೆ ಅಷ್ಟ ಮಠಗಳೂ ಸಹ ಉಡುಪಿಯಲ್ಲಿವೆ. ಈ ಅಷ್ಟಮಠಗಳ ಆಡಳಿತವೆ ಕೃಷ್ಣ ಮಠದ ಸಕಲ ಕಾರ್ಯಗಳ, ಸೇವೆಗಳ ನಿರ್ವಹಣೆ ಮಾಡುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಕೃಷ್ಣ ಮಠದ ಪೂಜೆ ಹಸ್ತಾಂತರವಾಗುತ್ತದೆ. ಈ ಸಂದರ್ಭವನ್ನು ಪರ್ಯಾಯ ಮಹೋತ್ಸವ ಎಂದು ಅತಿ ವೈಭವದಿಂದ ಆಚರಿಸಲಾಗುತ್ತದೆ. ಜನವರಿ 18ರ ಬೆಳಗ್ಗೆ ನಡೆಯುವ ಈ ಉತ್ಸವವನ್ನು ಮೈಸೂರಿನ ದಸರ ಹಬ್ಬದ ಮಾದರಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಒಮ್ಮೆ ಪರ್ಯಾಯ ಪೂರೈಸಿದ ಮಠಕ್ಕೆ, ಮತ್ತೊಮ್ಮೆ ಕೃಷ್ಣ ಮಠ ಪೂಜೆಯ ಅಧಿಕಾರ ಸಿಗಲು ಹದಿನಾಲ್ಕು ವರ್ಷಗಳು ಹಿಡಿಯುತ್ತವೆ. ಶ್ರೀ ಮಧ್ವಾಚಾರ್ಯರು ಪ್ರಾರಂಭಿಸಿದ ಈ ಪದ್ಧತಿ ಇವತ್ತಿನವರೆಗೂ ಚಾಚೂ ತಪ್ಪದೆ ಮುಂದುವರೆದುಕೊಂಡು ಬಂದಿದೆ.
ಕೃಷ್ಣ ಮಠದ ಪ್ರಾಂಗಣದಲ್ಲಿ ಮುಖ್ಯಪ್ರಾಣ, ಗರುಡ, ಸುಬ್ರಹ್ಮಣ್ಯ ಮತ್ತು ನವಗ್ರಹ ಗುಡಿಗಳಿವೆ. ಮಕರ ಸಂಕ್ರಾಂತಿ, ರಥಸಪ್ತಮಿ, ಮಧ್ವ ನವಮಿ, ಹನುಮಾನ ಜಯಂತಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಮಹೋತ್ಸವ, ವಿಜಯ ದಶಮಿ, ನರಕ ಚತುರ್ದಶಿ, ದೀಪಾವಳಿ, ಗೀತಾ ಜಯಂತಿ ಅಂತಹ ಹಬ್ಬಗಳನ್ನು ಪರ್ಯಾಯ ಮಠವು ಬಹಳ ವಿಜೃಂಭಣೆಯಿಂದ ಆಚರಿಸುತ್ತದೆ. ಉಡುಪಿಯು ಮಂಗಳೂರಿನಿಂದ 60 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ದೊರೆಯುತ್ತವೆ.
ಅಲ್ಲದೆ ಮಂಗಳೂರು ಹಾಗೂ ಬೆಂಗಳೂರಿನಿಂದ ರೈಲುಗಳು ದೊರೆಯುತ್ತವೆ. ಉಡುಪಿ ನಗರ ಪ್ರದೇಶವಾಗಿದ್ದು ವಸತಿ ಪಡೆಯಲು ಸಾಕಷ್ಟು ವಸತಿಗೃಹಗಳು ಹಾಗೂ ಹೋಟೆಲುಗಳಿವೆ. ಆದರೆ ಉತ್ಸವಗಳ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಮೊದಲೆ ಹೋಟೆಲ್ ರೂಂ ಬುಕ್ ಮಾಡಿ ಹೋದರೆ ಒಳಿತು.