ಹಸಿ ಮುಳ್ಳುಸೌತೆಯ ರೋಲ್ ಗಳನ್ನು ಕಣ್ಣಿನ ಕೆಳಭಾಗಕ್ಕೆ ಇಟ್ಟುಕೊಳ್ಳುವುದರಿಂದ ಕಪ್ಪು ವರ್ತುಲದ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಅದರಂತೆ ತಾಜಾ ಆಗಿರುವ ಮುಳ್ಳುಸೌತೆಯ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ದೇಹ ತೂಕ ಇಳಿಸಿ ಸ್ಟ್ರಾಂಗ್ ಆಗಬಹುದು ಎಂಬುದು ನಿಮಗೆ ಗೊತ್ತೇ?
ಹೆಚ್ಚಿನ ಪ್ರಮಾಣದ ನೀರಿನಂಶ ಹೊಂದಿರುವ ಮುಳ್ಳುಸೌತೆಯನ್ನು ಸೇವಿಸುವುದರಿಂದ ದೇಹಕ್ಕೆ ನೀರಿನ ಕೊರತೆ ಆಗುವುದಿಲ್ಲ. ಇದನ್ನು ಸಿಪ್ಪೆಯೊಂದಿಗೆ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಜೀರ್ಣ ಶಕ್ತಿಯನ್ನೂ ಚುರುಕುಗೊಳಿಸುವ ಈ ಜ್ಯೂಸ್ ತಯಾರಿ ಹೀಗೆ. ಮೊದಲು ಸೌತೆಕಾಯಿ ಕತ್ತರಿಸಿ, ಎಳೆಯದಾದರೆ ಸಿಪ್ಪೆ ತೆಗೆಯಬೇಕಿಲ್ಲ. ಇದಕ್ಕೆ ಕಾಲು ಇಂಚು ಗಾತ್ರದ ಶುಂಠಿ, ನಾಲ್ಕು ಪುದೀನಾ ಎಲೆ. ಜೀರಿಗೆ ಮತ್ತು ಕರಿಮೆಣಸನ್ನು ಬೆರೆಸಿ ರುಬ್ಬಿ.
ನಯವಾಗಿ ರುಬ್ಬಿದ ಬಳಿಕ ಕುಡಿಯುವ ಲೋಟಕ್ಕೆ ವರ್ಗಾಯಿಸಿ. ಬೇಕಿದ್ದರೆ ಚಿಟಿಕೆ ಉಪ್ಪು ಉದುರಿಸಿ (ಕಡ್ಡಾಯವಲ್ಲ). ಐಸ್ ಇಷ್ಟಪಡುವವರು ಒಂದು ತುಂಡು ಐಸ್ ಹಾಕಿ ಕುಡಿಯಿರಿ. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.