ಇಂದಿನ ಮಕ್ಕಳು ಕೈಗೆ ಸಿಕ್ಕಿದ್ದೆಲ್ಲಾ, ಬಾಯಿಗೆ ರುಚಿ ಅನಿಸಿದ್ದೆಲ್ಲಾ ತಿಂದು ಸಣ್ಣ ವಯಸ್ಸಿನಲ್ಲೇ ಅನಗತ್ಯ ರೋಗಗಳನ್ನು ಅಂಟಿಸಿಕೊಂಡಿರುತ್ತಾರೆ. ಇದರ ನಿಯಂತ್ರಣದ ಜವಾಬ್ದಾರಿ ಪೋಷಕರದ್ದು.
ಮಕ್ಕಳು ಕೇಳಿದಾಕ್ಷಣ ತೆಗೆಸಿಕೊಡುವ ಬುದ್ದಿಯನ್ನು ಬಿಟ್ಟು ಹೊರಗಿನ ತಿನಿಸಿಗೆ ಅಥವಾ ಜಂಕ್ ಫುಡ್ ಗಳಿಗೆ ವಾರದಲ್ಲಿ ಒಂದು ದಿನವನ್ನು ಮಾತ್ರ ಮೀಸಲಿಡಿ.
ಊಟಕ್ಕೆ ಪಾಲಿಶ್ ಮಾಡಿದ ಬೆಳ್ತಿಗೆ ಅಕ್ಕಿ ಬಳಸುವ ಬದಲು ಕೆಂಪಕ್ಕಿ ಬಳಸಿ. ಸಿರಿಧಾನ್ಯಗಳನ್ನು ದಿನಕ್ಕೊಮ್ಮೆ ಅಥವಾ ವಾರದಲ್ಲಿ ಮೂರು ಬಾರಿಯಾದರೂ ಒಂದಿಲ್ಲೊಂದು ರೂಪದಲ್ಲಿ ಬಳಸಿ.
ಸೊಪ್ಪು ತರಕಾರಿಗಳ ಮಕ್ಕಳಿಗಿಷ್ಟವಾಗುವ ವೈವಿಧ್ಯವನ್ನು ತಯಾರಿಸಿ ಕೊಡಿ. ಹೇಗಾದರೂ ತಾಜಾ ತರಕಾರಿಗಳು ಅವರ ಹೊಟ್ಟೆ ಸೇರಲಿ. ಚಾಕೊಲೇಟ್, ಚಿಪ್ಸ್ ನಂಥ ಕುರುಕುಲು ತಿಂಡಿ ಬದಲು ಮನೆಯಲ್ಲೇ ತಯಾರಿಸಿದ ಚಿಕ್ಕಿ, ಎಳ್ಳುಂಡೆ ಮೊದಲಾದ ತಿನಿಸುಗಳನ್ನು ನೀಡಿ.
ಸಕ್ಕರೆ ಬದಲು ಕಲ್ಲುಸಕ್ಕರೆ ಇಲ್ಲವೇ ಜೇನುತುಪ್ಪ ಬಳಸಿ, ಇದರಿಂದ ಕಫ ಸಂಬಂಧಿ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ. ಡಾಲ್ಡಾವನ್ನು ಮಕ್ಕಳ ಆಹಾರ ತಯಾರಿಸಲು ಬಳಸದಿರಿ. ತೆಂಗಿನೆಣ್ಣೆ ಅಥವಾ ತುಪ್ಪಕ್ಕೆ ಆದ್ಯತೆ ನೀಡಿ.