ಚಳಿಗಾಲದಲ್ಲಿ ತ್ವಚೆ ಬಿರುಕು ಬಿಡುವುದರಿಂದ ತುರಿಕೆ ಸಮಸ್ಯೆ ಪದೇ ಪದೇ ಕಾಡುತ್ತಿರುತ್ತದೆ. ಎಲ್ಲಾ ಬಗೆಯ ಎಣ್ಣೆಗಳಿಂದ ಮಸಾಜ್ ಮಾಡಿದ ಬಳಿಕವೂ ನಿಮ್ಮ ಸಮಸ್ಯೆಗೆ ಪರಿಹಾರ ದೊರೆತಿಲ್ಲವೇ…? ಹಾಗಿದ್ದರೆ ಇಲ್ಲಿ ಕೇಳಿ.
ಓಟ್ ಮೀಲ್ ನಿಂದ ಸ್ನಾನ ಮಾಡುವುದು ನಿಮ್ಮ ತುರಿಕೆಯ ಸಮಸ್ಯೆಗೆ ಅತ್ಯುತ್ತಮ ಮದ್ದಾಗಬಲ್ಲದು. ಇದು ತ್ವಚೆಯ ಮೃದು ಮಾಡುವುದು ಮಾತ್ರವಲ್ಲ ತ್ವಚೆಯ ಪಿಎಚ್ ಮಟ್ಟವನ್ನು ಕಾಪಾಡುತ್ತದೆ. ಇದು ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದ್ದು ನೋವಿನಿಂದಲೂ ಮುಕ್ತಿ ನೀಡುತ್ತದೆ.
ಒಂದು ಕಪ್ ಓಟ್ ಮೀಲ್ ಅನ್ನು ನೀರಿನಲ್ಲಿ ನೆನೆಸಿಟ್ಟು ಅರ್ಧ ಗಂಟೆ ಬಳಿಕ ರುಬ್ಬಿ. ಇದನ್ನು ನೀವು ಸ್ನಾನ ಮಾಡುವ ಬಿಸಿನೀರಿಗೆ ಸೇರಿಸಿ. ನೀರು ಸಂಪೂರ್ಣವಾಗಿ ಹಾಲಿನ ಬಣ್ಣಕ್ಕೆ ಬಂದ ಬಳಿಕ ಸ್ನಾನ ಮಾಡಿ. ಇದನ್ನು ಟಬ್ ಗೆ ಹಾಕಿ ಇಪ್ಪತ್ತು ನಿಮಿಷ ನೀವು ಮಲಗಿದರೆ ಮತ್ತೂ ಒಳ್ಳೆಯದು.
ಇದಕ್ಕೆ ಹಾಲು ಹಾಗೂ ಕಲ್ಲುಪ್ಪು ಬೆರೆಸಿ ಸ್ನಾನ ಮಾಡುವುದು ಮತ್ತೂ ಒಳ್ಳೆಯದು. ಬಳಿಕ ಸಂಪೂರ್ಣವಾಗಿ ಮೈ ಒರೆಸಿಕೊಳ್ಳಿ ಸ್ವಚ್ಛವಾದ ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಿ.
ಇದರೊಂದಿಗೆ ಹಾಲಿನ ಪುಡಿ, ಅಡುಗೆ ಸೋಡಾ, ಆಲಿವ್ ಆಯಿಲ್ ಮತ್ತಿತರ ವಸ್ತುಗಳನ್ನು ಬಳಕೆ ಮಾಡುವುದರಿಂದ ತ್ವಚೆಯ ಸೋಕು ದೂರವಾಗುತ್ತದೆ ಮಾತ್ರವಲ್ಲ ಇದು ಮಾಯಿಶ್ಚರೈಸರ್ ನ ಪರಿಣಾಮಗಳನ್ನು ನೀಡುತ್ತದೆ.