ಕಿಡ್ನಿ ಸ್ಟೋನ್ ಗಳು ರೂಪುಗೊಳ್ಳಲು ನಿಮ್ಮ ಆಹಾರ ಪದ್ಧತಿಯೂ ಕಾರಣವಿರಬಹುದು. ಹಾಗಾಗಿ ಈ ಕೆಲವು ವಸ್ತುಗಳಿಂದ ದೂರವಿರುವ ಮೂಲಕ ನಿಮ್ಮ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಟೊಮೆಟೊ ಹಣ್ಣಿನ ಸೇವನೆಯಿಂದ ಕಿಡ್ನಿ ಸ್ಟೋನ್ ಬರುತ್ತದೆ ಎಂಬ ಮಾತೊಂದಿದೆ. ಇದು ಅಕ್ಷರಶಃ ಸುಳ್ಳು ಎಂಬುದನ್ನು ಸಂಶೋಧನೆಗಳು ದೃಢಪಡಿಸುತ್ತವೆ. ಮೂತ್ರಪಿಂಡದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಆಕ್ಸಿಲೇಟ್ ಗಳು ಸಂಗ್ರಹವಾದಾಗ ಅವು ಕಲ್ಲುಗಳ ರೂಪದಲ್ಲಿ ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುತ್ತವೆ.
ಈ ಆಕ್ಸಿಲೇಟ್ ಅಂಶ ಹಣ್ಣು – ತರಕಾರಿಗಳಲ್ಲಿ ಸಹಜವಾಗಿಯೇ ಇರುತ್ತದೆ. ಸಾಮಾನ್ಯವಾಗಿ ನಮ್ಮ ದೇಹದಲ್ಲಿರುವ ರಕ್ತದ ಹರಿವು ಈ ಕ್ಯಾಲ್ಸಿಯಂ ಪ್ರಮಾಣವನ್ನು ಹೀರಿಕೊಳ್ಳುತ್ತದೆ. ಕೆಲವು ಬಾರಿ ಮಾತ್ರ ಅದು ಮೂತ್ರಪಿಂಡದಲ್ಲಿ ಶೇಖರಣೆಗೊಂಡು ಕಲ್ಲುಗಳ ರೂಪ ಪಡೆಯುತ್ತದೆ.
ಟೊಮೆಟೊದಲ್ಲಿ ಈ ಆಕ್ಸಿಲೇಟ್ ಪ್ರಮಾಣ ಇರುವುದು ಬಹಳ ಕಡಿಮೆ. ಇದರಿಂದ ಕಲ್ಲು ಸಂಗ್ರಹವಾಗಲು ಸಾಧ್ಯವೇ ಇಲ್ಲ. ಕಿಡ್ನಿ ಸಮಸ್ಯೆ ಈಗಾಗಲೇ ನಿಮಗಿದ್ದರೆ ಇದನ್ನು ನಿಯಂತ್ರಣದಲ್ಲಿ ಸೇವಿಸುವುದು ಒಳ್ಳೆಯದು. ಪಾಲಕ್ ಸೊಪ್ಪು, ಬೀಟ್ ರೂಟ್ ಗಳಲ್ಲಿ ಈ ಅಂಶ ಹೇರಳವಾಗಿದ್ದು ಮೂತ್ರಪಿಂಡದ ಸಮಸ್ಯೆ ನಿಮಗಿದ್ದರೆ ಈ ತರಕಾರಿಗಳ ಸೇವನೆಯನ್ನು ಕಡಿಮೆ ಮಾಡಿ.