ದಂಪತಿಗಳು ಎಂದ ಬಳಿಕ ಸಣ್ಣ ಪುಟ್ಟ ವಿಷಯಕ್ಕೆ ಜಗಳಗಳಾಗುವುದು ಸಾಮಾನ್ಯ. ಇಬ್ಬರೂ ಪರಸ್ಪರ ಮಾತನಾಡದೆ ಸುಮ್ಮನಿದ್ದ ಮಾತ್ರಕ್ಕೆ ಸಿಟ್ಟು ತಣ್ಣಗಾಗುವುದೂ ಇಲ್ಲ. ಜಗಳಕ್ಕೆ ಮುಕ್ತಿ ಸಿಗುವುದೂ ಇಲ್ಲ. ಸಣ್ಣ ಪುಟ್ಟ ಜಗಳಗಳನ್ನು ಹೀಗೆ ಕೊನೆಗಾಣಿಸಬಹುದು.
ಕೂತು ಮಾತನಾಡಿ ಪರಿಹರಿಸಿಕೊಳ್ಳಿ. ಇಬ್ಬರೂ ಒಂದಿಲ್ಲೊಂದು ಕೆಲಸದಲ್ಲಿ ನಿರತರಾಗಿರುವಾಗ ಜಗಳವನ್ನು ಮುಂದುವರಿಸದಿರಿ. ಈ ವಿಷಯಕ್ಕೆ ಈಗ ವಿರಾಮ ಕೊಟ್ಟು ಬಳಿಕ ಚರ್ಚಿಸೋಣ ಎಂದು ನಿರ್ಧರಿಸಿ. ಅಂದಿನ ದಿನ ಮಲಗುವ ಮುನ್ನ ಅದೇ ವಿಷಯದ ಕುರಿತು ಮಾತನಾಡಿ. ವಿಷಯವನ್ನು ಇತ್ಯರ್ಥ ಮಾಡಿಕೊಳ್ಳಿ.
ಒಂದೇ ವಿಷಯದ ಬಗ್ಗೆ ಪರಸ್ಪರರಿಗೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತಿದ್ದರೆ ಆ ವಿಷಯದ ಬಗ್ಗೆ ಮಾತನಾಡುವುದನ್ನೇ ಬಿಟ್ಟುಬಿಡಿ. ನಾನು ನನ್ನದು ಎಂಬ ಭಾವನೆ ಇದ್ದಾಗ ಜಗಳಗಳಾಗುವುದು ಹೆಚ್ಚು. ಅದರ ಬದಲು ನಾವು ನಮ್ಮದು ಎಂದುಕೊಳ್ಳಿ.
ಒಬ್ಬರಿಗೊಬ್ಬರು ಸಮಯ ಮೀಸಲಿಡಿ. ದಿನದ ಆಗುಹೋಗುಗಳನ್ನು ಸಂಗಾತಿಯೊಂದಿಗೆ ಚರ್ಚಿಸಿ. ಇದನ್ನು ಪರಿಹರಿಸಲು ನಾನು ಏನು ಮಾಡಬಹುದು ಎಂಬುದು ನಿಮ್ಮ ಚರ್ಚೆಯ ವಿಷಯವಾಗಿರಲಿ. ಅವರ ಭಾವನೆಗಳಿಗೆ ಆದ್ಯತೆ ನೀಡಿ. ನನ್ನ ತಪ್ಪುಗಳನ್ನು ನಾನು ಸರಿಪಡಿಸಿಕೊಳ್ಳುತ್ತೇನೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ. ಆಗ ನಿಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.