ಬಹಳ ಹೊತ್ತಿನ ಕಾಲ ಕೂದಲನ್ನು ಒಂದೇ ರೀತಿ ನಿಲ್ಲುವಂತೆ ಮಾಡುವ ಹೇರ್ ಜೆಲ್ ಗಳೆಂದರೆ ಯುವಕರಿಗೆ ಬಹಳ ಇಷ್ಟ. ಅದರೆ ಇದನ್ನು ನಿತ್ಯ ಬಳಸುವುದರಿಂದ ಎಷ್ಟೆಲ್ಲಾ ಸಮಸ್ಯೆಗಳಿವೆ ಎಂಬುದು ನಿಮಗೆ ಗೊತ್ತೇ?
ಹೆಚ್ಚಿನ ಜೆಲ್ ಗಳಲ್ಲಿ ಆಲ್ಕೋಹಾಲ್ ಮತ್ತು ಹಾನಿಕಾರಕ ರಾಸಾಯನಿಕಗಳಿವೆ. ಇವು ಸುಮಾರು ಹೊತ್ತಿನ ಕಾಲ ಕೂದಲನ್ನು ನೇರವಾಗಿ ನಿಲ್ಲಿಸುತ್ತವೆ. ಬಳಿಕ ಅಲ್ಲೇ ಒಣಗುತ್ತವೆ. ಇವು ತೇವಾಂಶವನ್ನು ಕಡಿಮೆ ಮಾಡಿ ಕೂದಲನ್ನು ಒರಟಾಗಿಸುತ್ತವೆ. ಇದರಿಂದ ನೆತ್ತಿಯಲ್ಲಿ ತುರಿಕೆ, ಹೊಟ್ಟಿನ ಸಮಸ್ಯೆ ಮೂಡುವುದೂ ಉಂಟು.
ನಿರಂತರ ಜೆಲ್ ಬಳಕೆಯಿಂದ ನಿಮ್ಮ ಕೂದಲು ದುರ್ಬಲವಾಗುತ್ತದೆ. ಕೂದಲು ತೆಳುವಾಗಿ ಉದುರುವುದೂ ಹೆಚ್ಚುತ್ತದೆ. ಹೆಚ್ಚಿನ ಜೆಲ್ ಬಳಕೆಯಿಂದ ಕೂದಲ ಬಣ್ಣವೂ ಬದಲಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗಲು ಇದೂ ಒಂದು ಕಾರಣವಿರಬಹುದು.
ಹಾಗಾಗಿ ನಿತ್ಯ ಇದನ್ನು ಬಳಸುವ ಬದಲು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಬಳಸಿ. ಸಭೆ ಸಮಾರಂಭಗಳಿದ್ದಾಗ ಮಾತ್ರ ಬಳಸಿ. ಬಳಿಕ ಸ್ವಚ್ಛವಾಗಿ ತೊಳೆದು ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ.