ಕೀಳರಿಮೆ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತದೆ. ಕೈ ಬೆರಳುಗಳು ಹೇಗೆ ಸಮನಾಗಿ ಇಲ್ಲವೋ ಹಾಗೇ ಮನುಷ್ಯ ಕೂಡ ಎಲ್ಲ ರೀತಿಯಲ್ಲಿ ಪರಿಪೂರ್ಣನಲ್ಲ. ಕೆಲವರು ಈ ಕೀಳರಿಮೆಯಿಂದ ಹೊರಬಾರಲು ಆಗದೇ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ.
ಸಾಮಾನ್ಯವಾಗಿ ನಮ್ಮ ಬಣ್ಣ, ಗಾತ್ರ, ಅರ್ಹತೆ, ಅಂತಸ್ತುಗಳು ಇದಕ್ಕೆ ಮುಖ್ಯ ಕಾರಣವಾಗುತ್ತದೆ.
ನಾನು ಅವರಷ್ಟು ಓದಿಲ್ಲ, ನನಗೆ ಇಂಗ್ಲಿಷ್ ಸರಿಯಾಗಿ ಮಾತನಾಡುವುದಕ್ಕೆ ಬರುವುದಿಲ್ಲ, ಇನ್ನು ನಾನು ದಪ್ಪಗಿದ್ದೇನೆ/ ಸಣ್ಣಗಿದ್ದೇನೆ, ನನ್ನ ಬಣ್ಣ ಕಪ್ಪು, ನನಗೆ ತಲೆಕೂದಲು ಇಲ್ಲ ಹೀಗೆ ಎಲ್ಲವನ್ನೂ ಇನ್ನೊಬ್ಬರ ಜತೆ ಹೋಲಿಸಿಕೊಂಡು ನಾವು ನಮ್ಮೊಳಗೊಂದು ಕೀಳರಿಮೆಯನ್ನು ಬೆಳೆಸಿಕೊಂಡು ಅದನ್ನು ದಾಟಿ ಬರಲಾಗದೇ ಒದ್ದಾಡುತ್ತೇವೆ.
ಕೆಲವರಿಗೆ ಹಣ ಬೇಕಾದಷ್ಟು ಇರುತ್ತದೆ. ಆದರೆ ಅವರಿಗೆ ಆರೋಗ್ಯ ಭಾಗ್ಯನೇ ಇರುವುದಿಲ್ಲ, ಇನ್ನು ಕೆಲವರಿಗೆ ಆರೋಗ್ಯ ಚೆನ್ನಾಗಿರುತ್ತದೆ ಆದರೆ ಜೀವನ ನಡೆಸುವುದಕ್ಕೆ ಹಣ ಇರುವುದಿಲ್ಲ. ಹಾಗಾಗಿ ನಮ್ಮ ಬಳಿ ಏನಿದೆಯೋ ಅದನ್ನು ಬಳಸಿಕೊಂಡು ಜೀವನ ನಡೆಸುವುದಕ್ಕೆ ಮೊದಲು ಕಲಿಬೇಕು.
ಇನ್ನು ದಪ್ಪ/ಸಣ್ಣ, ಕಪ್ಪು, ಬಿಳುಪಿಗಿಂತ ಮನುಷ್ಯ, ಮನುಷ್ಯತ್ವ ಮುಖ್ಯ ಎಂಬುದನ್ನು ಅರಿಯಬೇಕು. ಸ್ವಲ್ಪ ಕಷ್ಟವಾಗುತ್ತದೆ. ಆದರೆ ನಮ್ಮೊಳಗೆ ಅದನ್ನು ಬೆಳೆಸಿಕೊಳ್ಳುತ್ತಾ ಹೋದಂತೆ ಜೀವನ ಹೊಸದಾಗಿ ತೆರೆದುಕೊಳ್ಳುತ್ತದೆ.