ಅಡುಗೆ ಮನೆಯಲ್ಲಿ ಮೂಲೆಯಲ್ಲಿ ತಿಂಡಿ ಚೂರು ಬಿದ್ದಿದ್ದರೆ ಸಾಕು ಕೆಲವೇ ಹೊತ್ತಿನಲ್ಲಿ ಅದಕ್ಕೆ ಇರುವೆಗಳು ಮುತ್ತಿಕೊಳ್ಳುವುದನ್ನು ನೀವು ಕಂಡಿರಬಹುದು. ಅಡುಗೆ ಮನೆಯ ಕೆಲಸವಾದ ಕೂಡಲೆ ಅದನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ.
ಚಾಕ್ ಪೀಸ್ ಅನ್ನು ಸಣ್ಣಗೆ ಪುಡಿ ಮಾಡಿ ಇರುವೆ ಬರುವ ಜಾಗಕ್ಕೆ ಉದುರಿಸಿದರೆ ಅವು ತಮ್ಮ ಗೂಡಿನಿಂದ ಹೊರಬರುವುದಿಲ್ಲ. ಚಾಕ್ ನಿಂದ ಗೋಡೆಯ ಬದಿಗೆ ಗೆರೆ ಎಳೆದು ಬಿಟ್ಟರೂ ಸಾಕು. ಈ ಪುಡಿಯತ್ತ ಮನೆಯ ಮಕ್ಕಳ ಗಮನ ಹೋಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ.
ನಿಂಬೆ ಹಣ್ಣಿನಲ್ಲಿ ಆಮ್ಲೀಯ ಅಂಶವಿದ್ದು ಇದು ಇರುವೆಗಳನ್ನು ನಿಯಂತ್ರಿಸುತ್ತದೆ. ಮನೆ ಒರೆಸುವ ನೀರಿಗೆ ನಾಲ್ಕು ಹನಿ ಲಿಂಬೆ ರಸ ಹಾಕಿ. ಇದರ ವಾಸನೆಗೆ ಇರುವೆ ಹತ್ತಿರ ಸುಳಿಯುವುದಿಲ್ಲ.
ಸಕ್ಕರೆ ಡಬ್ಬ ಇಡುವ ಜಾಗ ನಿತ್ಯ ಕ್ಲೀನ್ ಮಾಡಲು ಸಿಗುವಂತಿರಲಿ. ಒಂದು ಕಾಳು ಬಿದ್ದರೂ ಓಡಿ ಬರುವ ಇರುವೆ ನಿಮ್ಮ ಅಡುಗೆ ಮನೆಯನ್ನು ನಿತ್ಯ ಭೇಟಿಯ ಸ್ಥಳವನ್ನಾಗಿ ಬದಲಾಯಿಸಿಕೊಳ್ಳದಂತೆ ನೋಡಿಕೊಳ್ಳಿ.
ಕಿತ್ತಳೆ ಹಣ್ಣಿನ ಸಿಪ್ಪೆಯ ಪೇಸ್ಟ್ ಅಥವಾ ಪುಡಿಯನ್ನು ಗೋಡೆ ಬದಿ ಉದುರಿಸಿದರೂ ಇರುವೆ ಕಾಟ ಕೊಡದು. ಮೆಣಸಿನ ಪುಡಿಯನ್ನು ಇರುವೆ ಬರುವ ಜಾಗಕ್ಕೆ ಚಿಮುಕಿಸಿದರೂ ಸಾಕು, ಅವು ಮತ್ತೆ ಅತ್ತ ಸುಳಿಯುವುದಿಲ್ಲ. ಉಪ್ಪು, ವೈಟ್ ವಿನೆಗರ್, ದಾಲ್ಚಿನಿ, ಅರಿಶಿನ ಪುಡಿಗಳೂ ಇದೇ ಪರಿಣಾಮವನ್ನು ಬೀರುತ್ತವೆ.