ಅನಗತ್ಯ ಕೂದಲು ಕೆಲವೊಮ್ಮೆ ಗಲ್ಲ ಅಥವಾ ತುಟಿಯ ಮೇಲ್ಭಾಗದಲ್ಲಿ ಬೆಳೆದು ಮಹಿಳೆಯರಿಗೆ ಚಿಂತೆಯನ್ನು ತಂದೊಡ್ಡೀತು. ಪುರುಷರಿಗೆ ಇಲ್ಲಿ ಬೆಳೆಯುವ ಮೀಸೆ ಗಡ್ಡ ಹೆಮ್ಮೆಯ ಸಂಕೇತವಾದರೆ ಮಹಿಳೆಯರಿಗೆ ತಲೆ ನೋವಿನ ಕೆಲಸ.
ಕೆಲ ಮಹಿಳೆಯರಿಗೆ ಹಾರ್ಮೋನ್ ಸಮಸ್ಯೆಯಿಂದ ಅಥವಾ ವಂಶವಾಹಿನಿಯಿಂದ ಗಲ್ಲ ಹಾಗೂ ಮೂಗಿನ ಕೆಳಭಾಗದಲ್ಲಿ ಕೂದಲು ಬೆಳೆಯಬಹುದು. ಇದರ ನಿವಾರಣೆಗೆ ಲೇಸರ್ ಹೇರ್ ರಿಮೂವರ್, ಶೇವಿಂಗ್ ಕ್ರೀಮ್ ಅಥವಾ ಶೇವಿಂಗ್ ಜೆಲ್ ಗಳನ್ನು ಬಳಸಬಹುದು.
ಆದರೆ ಬಹುತೇಕರು ಹೀಗೆ ಮಾಡುವುದರಿಂದ ಈ ಭಾಗದಲ್ಲಿ ದಟ್ಟವಾದ ಕೂದಲು ಬೆಳೆಯುತ್ತದೆ ಎಂದು ನಂಬಿಕೊಂಡಿರುತ್ತಾರೆ. ಇದು ಶುದ್ಧ ಸುಳ್ಳು. ಅನಗತ್ಯವಾಗಿ ಇಲ್ಲಿ ಬೆಳೆಯುವ ಕೂದಲು ಖಂಡಿತಾ ತೆಗೆಯಬಹುದು. ಆದರೆ ಕ್ರೀಮ್ ಬಳಸುವಾಗ ಎಚ್ಚರವಿರಲಿ. ವಿಪರೀತ ಸ್ಟ್ರಾಂಗ್ ಎನಿಸುವ ಅಂದರೆ ರಾಸಾಯನಿಕ ವಸ್ತುಗಳಿರುವ ಕ್ರೀಮ್ ಅನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ.
ಮುಖದ ಮೇಲಿರುವ ಕೂದಲುಗಳ ಸಂಖ್ಯೆ ವಿಪರೀತ ಹೆಚ್ಚಿದರೆ, ಈ ಕೂದಲು ದೇಹದ ಇತರ ಭಾಗಗಳಲ್ಲೂ ಮೂಡಲು ಆರಂಭವಾದರೆ, ತೂಕದಲ್ಲಿ ದಿಢೀರ್ ಹೆಚ್ಚು ಕಡಿಮೆಯಾದರೆ, ಕೂದಲು ತೆಳ್ಳಗಾದರೆ ವೈದ್ಯರನ್ನು ಸಂಪರ್ಕಿಸವುದು ಒಳ್ಳೆಯದು.