ಬೇಗನೆ ಆಗುವಂತಹ ತಿಂಡಿಗಳು ಇದ್ದರೆ ಬೆಳಗಿನ ಅರ್ಧ ತಲೆಬಿಸಿ ಕಡಿಮೆಯಾಗುತ್ತದೆ. ದಿನಾ ಇಡ್ಲಿ, ದೋಸೆ ಮಾಡುವುದಕ್ಕೆ ಬೇಜಾರು ಅನ್ನುವವರು ಈ ಸಬ್ಬಕ್ಕಿ ಕಿಚಡಿ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಸಬ್ಬಕ್ಕಿ, 3 ಹಸಿಮೆಣಸು, ½ ಕಪ್ – ಹುರಿದ ಶೇಂಗಾ ಬೀಜ, 2 – ಆಲೂಗಡ್ಡೆ, 1 ಟೀ ಸ್ಪೂನ್ – ಜೀರಿಗೆ, 8 – ಕರಿಬೇವಿನ ಎಸಳು, ಉಪ್ಪು – ರುಚಿಗೆ ತಕ್ಕಷ್ಟು, 2ಟೇಬಲ್ ಸ್ಪೂನ್ – ಎಣ್ಣೆ, 1 ¼ ಕಪ್ ನೀರು, 1 ಚಮಚ – ಲಿಂಬೆಹಣ್ಣಿನ ರಸ, ಸ್ವಲ್ಪ- ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ:
ಮೊದಲಿಗೆ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು 1 ¼ ಕಪ್ ನೀರಿನಲ್ಲಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಇದು ನೀರನ್ನೆಲ್ಲಾ ಹೀರಿಕೊಂಡಿರುತ್ತದೆ. ಇದಕ್ಕೆ ತರಿತರಿಯಾಗಿ ಪುಡಿದ ಶೇಂಗಾ ಬೀಜವನ್ನು ಹಾಕಿ ನಿಧಾನಕ್ಕೆ ಮಿಕ್ಸ್ ಮಾಡಿಕೊಂಡು ಇಡಿ.
ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಜೀರಿಗೆ ಸೇರಿಸಿ ಅದು ಸಿಡಿದಾಗ ಆಲೂಗಡ್ಡೆಯನ್ನು ಕತ್ತರಿಸಿ ಹಾಕಿ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಆಲೂಗಡ್ಡೆ ಸ್ವಲ್ಪ ಬೆಂದ ಬಳಿಕ ಅದಕ್ಕೆ ಕರಿಬೇವು, ಸೀಳಿದ ಹಸಿಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಕ್ಕೆ ಸಬ್ಬಕ್ಕಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಿಧಾನಕ್ಕೆ ಮಿಕ್ಸ್ ಮಾಡಿಕೊಂಡು 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇದಕ್ಕೆ 1 ಚಮಚದಷ್ಟು ಲಿಂಬೆಹಣ್ಣಿನ ರಸ, ಸ್ವಲ್ಪ ಕೊತ್ತಂಬರಿಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ.