ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಭವ ಲಿಂಗವೆಂದು ಪೂಜಿಸಲ್ಪಡುವ ಶಿಶಿಲೇಶ್ವರ ದೇವಸ್ಥಾನ ದೈವ ದೇವತೆಗಳ ಪುಣ್ಯದ ನೆಲೆವೀಡು. ಊರಿನ ಹೆಸರಿನೊಂದಿಗೆ ಬೆರೆತಿರುವ ಅಪರೂಪದ ದೇವಸ್ಥಾನ ಇದಾಗಿದೆ. ಕಪಿಲ ನದಿಯ ದಂಡೆಯ ಮೇಲಿರುವ ಶಿಲಾಮಯ ಶಿಶಿಲೇಶ್ವರ ದೇವಾಲಯ ಪಕ್ಕದಲ್ಲಿ ನದಿಯಿಂದಾಶ್ರಯಿಸಿದ ಮನಮೋಹಕ ಮತ್ಸ್ಯತೀರ್ಥ. ಇದು ಇಲ್ಲಿಯ ದೃಶ್ಯ ವೈಶಿಷ್ಟ್ಯ.
ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕಾಗಿ 45ಕಿ.ಮೀ. ಮತ್ತು ಉಪ್ಪಿನಂಗಡಿಯಿಂದ ನೆಲ್ಯಾಡಿ-ಕೊಕ್ಕಡ ಮಾರ್ಗವಾಗಿ ಅಷ್ಟೇ ದೂರದಲ್ಲಿದೆ ಶಿಶಿಲ. ಪಾವನ ನದಿ ಕಪಿಲೆಯ ದಡದ ಮೇಲೆ ಶಿಶಿಲೇಶ್ವರ ದೇವಸ್ಥಾನವು ಸ್ಥಾಪಿತವಾಗಿದೆ. ಗರ್ಭಗೃಹವು ಸಂಪೂರ್ಣವಾಗಿ ಶಿಲಾಮಯವಾಗಿದ್ದು, ಬಾಹ್ಯವಾಗಿ ಜೈನಬಸದಿಯನ್ನು ಹೋಲುತ್ತದೆ.
ಮತ್ಸ್ಯತೀರ್ಥದ ಪಕ್ಕದಲ್ಲಿರುವ ಕಪಿಲೆ ಕಲ್ಲು , ಹುಲಿಕಲ್ಲುಗಳು ಹಿಂದೆ ದನ, ಹುಲಿಗಳಾಗಿದ್ದವೆಂದೂ ದನವು ಈ ನದಿಗೆ ಹಾರಿದಾಗ, ಹುಲಿಯೂ ಅದರ ಆಸೆಗೆ ಹಾರಿತೆಂದು, ಆಗ ದ್ಯೆವ ಸಂಕಲ್ಪದಂತೆ ಕಲ್ಲುಗಳಾದವು ಎಂಬ ಐತಿಹ್ಯವಿದೆ. ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಈ ದೇವಾಲಯದಲ್ಲಿ ಬಾವಿ ಇರುವುದಿಲ್ಲ. ಈ ಮತ್ಸ್ಯತೀರ್ಥವನ್ನೇ ದೇವರಿಗೆ ಅಭಿಷೇಕ ಮಾಡುವುದು ಇಲ್ಲಿಯ ವೈಶಿಷ್ಟ್ಯ. ಇಲ್ಲಿರುವ ಮೀನಿನ ವೀಕ್ಷಣೆಗೆಂದೇ ಪ್ರವಾಸಿಗರು ಆಗಮಿಸುತ್ತಾರೆ.