ಭಾನುವಾರ ಬಂತೆಂದರೆ ಕೆಲವರು ಮನೆಯಲ್ಲಿ ಏನಾದರೂ ಸ್ಪೆಷಲ್ ತಿಂಡಿ ಮಾಡುತ್ತಾರೆ. ಇಲ್ಲಿ ರುಚಿಕರವಾದ ಮೆಂತೆಸೊಪ್ಪಿನ ಪೂರಿ ಮಾಡುವ ವಿಧಾನ ಇದೆ ನೋಡಿ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಇದ್ದಾಗ ಮಾಡಿಕೊಂಡು ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
1ಕಪ್ ಗೋಧಿ ಹಿಟ್ಟು, 1 ½ ಕಪ್ ಮೈದಾ ಹಿಟ್ಟು, 1 ಕಪ್-ಮೆಂತೆ ಸೊಪ್ಪು, ½ ಟೀ ಸ್ಪೂನ್- ಓಂಕಾಳು, 1 ಟೇಬಲ್ ಸ್ಪೂನ್-ಮೊಸರು, ¼ ಕಪ್ ಹಾಲು, 1 ಟೇಬಲ್ ಸ್ಪೂನ್-ಎಣ್ಣೆ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-ಕರಿಯಲು.
ಮಾಡುವ ವಿಧಾನ:
ಮೊದಲಿಗೆ ಮೆಂತೆ ದಂಟಿನಿಂದ ಸೊಪ್ಪನ್ನು ಮಾತ್ರ ಬೇರ್ಪಡಿಸಿಕೊಳ್ಳಿ. ನಂತರ ಸೊಪ್ಪನ್ನು ಚೆನ್ನಾಗಿ ತೊಳೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ನಂತರ ಇದಕ್ಕೆ ಉಪ್ಪು, ಅರಿಶಿನ ಹಾಕಿ 5 ನಿಮಿಷಗಳ ಕಾಲ ಹಾಗೇಯೇ ಬಿಡಿ. ಇದರಲ್ಲಿನ ಹೆಚ್ಚುವರಿ ನೀರನ್ನು ಹಿಂಡಿ ತೆಗೆಯಿರಿ. ನಂತರ ಒಂದು ದೊಡ್ಡ ಬೌಲ್ ಗೆ ಗೋಧಿ ಹಿಟ್ಟು ಮೈದಾ ಹಿಟ್ಟು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹಾಗೇಯೇ ಇದಕ್ಕೆ ಕತ್ತರಿಸಿಟ್ಟುಕೊಂಡ ಮೆಂತೆಸೊಪ್ಪು, ಮೊಸರು, ಓಂ ಕಾಳು, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಹಾಲು ಹಾಕಿಕೊಂಡು ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಮೆತ್ತೆಗೆ ನಾದಿಕೊಳ್ಳಿ. ಹಿಟ್ಟಿನ ಮೇಲೆ ಸ್ವಲ್ಪ ಎಣ್ಣೆ ಹಚ್ಚಿ ½ ಗಂಟೆಗಳ ಕಾಲ ಈ ಹಿಟ್ಟನ್ನು ಹಾಗೇಯೇ ಇಡಿ.
ನಂತರ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಬಾಣಲೆಗೆ ಹಾಕಿಕೊಂಡು ಗ್ಯಾಸ್ ಮೇಲೆ ಇಡಿ. ನಂತರ ಹಿಟ್ಟಿನ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪೂರಿ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಕರಿದು ತೆಗೆಯಿರಿ. ಆಲೂಗಡ್ಡೆ ಬಾಜಿಯೊಂದಿಗೆ ಸವಿಯಿರಿ.