ಸಿಹಿ ಮಾಡಿಕೊಂಡು ಸವಿಯಬೇಕು ಅನಿಸಬೇಕು ಅಂದಾಗಲೆಲ್ಲಾ ಪಾಯಸದ ನೆನಪಾಗುತ್ತದೆ. ಕಡಲೆಬೇಳೆ, ಹೆಸರುಬೇಳೆ ಅಲ್ಲದೇ ಸಿಹಿಕುಂಬಳಕಾಯಿಯಿಂದಲೂ ರುಚಿಕರವಾದ ಪಾಯಸ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಸಿಹಿ ಕುಂಬಳಕಾಯಿ-2 ಕಪ್, ಬೆಲ್ಲ-1 ಕಪ್, ತೆಂಗಿನಕಾಯಿ ತುರಿ-1 ಕಪ್, ತುಪ್ಪ-2 ಟೇಬಲ್ ಸ್ಪೂನ್, ಗೋಡಂಬಿ,-ಸ್ವಲ್ಪ, ದ್ರಾಕ್ಷಿ-ಸ್ವಲ್ಪ, ಹಾಲು-1 ಕಪ್, ಏಲಕ್ಕಿ-1.
ಮಾಡುವ ವಿಧಾನ:
ಮೊದಲಿಗೆ ಕುಂಬಳಕಾಯಿ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿಕೊಳ್ಳಿ. ನಂತರ ಒಂದು ದಪ್ಪ ತಳದ ಪಾತ್ರೆಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಹುರಿದುಕೊಳ್ಳಿ. ನಂತರ ಕುಂಬಳಕಾಯಿ ಹೋಳುಗಳನ್ನು ಬಾಣಲೆಯಲ್ಲಿ ಹುರಿದುಕೊಂಡು ಒಂದು ಪ್ಲೇಟ್ ಮುಚ್ಚಿ ಬೇಯಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಏಲಕ್ಕಿ ಹಾಕಿ ರುಬ್ಬಿಕೊಳ್ಳಿ.
ನಂತರ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಕುಂಬಳಕಾಯಿ ಬೆಂದ ನಂತರ ತೆಂಗಿನಕಾಯಿ ಹಾಲು ಸೇರಿಸಿ ಬೆಲ್ಲ ಹಾಕಿ ಕುದಿಸಿ. ಬೇಕಿದ್ದರೆ ನೀರು ಸೇರಿಸಿಕೊಳ್ಳಿ. ನಂತರ ಇದು ಸ್ವಲ್ಪ ತಣಿದ ನಂತರ 1 ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸವಿಯಿರಿ.