ಮುಖದ ಸೌಂದರ್ಯದಷ್ಟೆ ಕಾಲುಗಳ ಶುಚಿತ್ವ ಕೂಡಾ ಅಷ್ಟೇ ಮುಖ್ಯ. ಸ್ನಾನ ಮಾಡುವಾಗ ಕಾಲುಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಪಾದಗಳನ್ನು ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಬೇಕು. ಇದರಿಂದ ಕಾಲಿನ ಒಡಕು ಅಥವಾ ಒಣಚರ್ಮ ಸಮಸ್ಯೆ ಕಡಿಮೆಯಾಗುತ್ತದೆ. ಕಾಲುಗಳ ಆರೋಗ್ಯದ ಬಗ್ಗೆ ಈ ಸಲಹೆಗಳು ನಿಮಗಾಗಿ.
ಕಾಲುಗಳನ್ನು ಸ್ವಚ್ಚಗೊಳಿಸುವ ಮೊದಲು ಉಗುರುಗಳ ಮೇಲೆ ನೇಲ್ ಪಾಲಿಶ್ ಇದ್ದಲ್ಲಿ ತೆಗೆದು ಹಾಕಿ. ನಂತರ ಉಪ್ಪು ಮತ್ತು ಕ್ರೀಂ, ಟಬ್ ಅಥವಾ ಬಕೆಟ್ನಲ್ಲಿರುವ ಬೆಚ್ಚಗಿನ ನೀರಿಗೆ ಹಾಕಿ ಕಾಲುಗಳನ್ನು ಆ ಟಬ್ ನಲ್ಲಿ ಮುಳುಗಿಸಿ. ಹತ್ತು ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಳ್ಳಿ. ನಂತರ ಕಾಲುಗಳನ್ನು ಹೊರಗೆ ತೆಗೆದುಕೊಂಡು ಸ್ಕ್ರಬ್ ಮಾಡಿ ತಣ್ಣೀರಿನಿಂದ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಉಪ್ಪು ಪಾದಗಳ ಚರ್ಮವನ್ನು ಮೃದುಗೊಳಿಸುತ್ತದೆ.
ಪಾದಗಳ ಚರ್ಮವು ಹೆಚ್ಚು ಒಣಗಿದ್ದರೆ ಆಲಿವ್ ಆಯಿಲ್ ಹಾಕಿ ಮಸಾಜ್ ಮಾಡಿ. ಪಾದಗಳನ್ನು ತೊಳೆದ ನಂತರ ಪಾದಗಳನ್ನು ಒಣಗಿಸದೆ ಸಾಕ್ಸ್ ಧರಿಸಬೇಡಿ. ಇದು ಕಾಲಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಕಾಲುಗಳು ಪೂರ್ತಿಯಾಗಿ ಒಣಗಿದ ನಂತರ ಅಗತ್ಯವಿದ್ದರೆ ಒಂದು ಕೋಟ್ ನೇಲ್ ಪಾಲಿಶ್ ಹಚ್ಚಿ.
ಕಾಲ್ಬೆರಳುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗದಂತಹ ಬೂಟು ಅಥವಾ ಚಪ್ಪಲಿಗಳನ್ನು ಖರೀದಿಸಿ. ಇಲ್ಲವಾದಲ್ಲಿ ರಕ್ತಸ್ರಾವ, ಸೋಂಕು ಅಥವಾ ಯಾವುದೇ ರೀತಿ ಹಾನಿ ಆಗಬಹುದು. ಪಾದಗಳನ್ನು ತೊಳೆಯುವಾಗ ಬೆಚ್ಚಗಿನ ನೀರನ್ನು ಬಳಸಿ. ತುಂಬಾ ಬಿಸಿ ನೀರು ಹಾನಿಕಾರಕ.
ಪ್ರತಿದಿನ ಮಾಯಿಶ್ಚರೈಸರ್ ಹಚ್ಚಿ ಪಾದಗಳ ತೇವಾಂಶವನ್ನು ಕಾಪಾಡಿಕೊಳ್ಳಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಕಾಲುಗಳ ಸೌಂದರ್ಯ ಹೆಚ್ಚುತ್ತದೆ.