ರಜೆಯ ಸಮಯ ಮಕ್ಕಳು ಮನೆಯಲ್ಲಿ ಇದ್ದರೆ ಏನಾದರು ತಿಂಡಿ ಕೇಳುತ್ತಾ ಇರುತ್ತಾರೆ. ದಿನಾ ಏನು ತಿಂಡಿ ಮಾಡಿ ಕೊಡುವುದು ಎಂದುಕೊಳ್ಳುವ ಅಮ್ಮಂದಿರು ಮನೆಯಲ್ಲಿ ಈ ಖಾರದ ಅವಲಕ್ಕಿ ಒಗ್ಗರಣೆಯನ್ನು ಮಾಡಿಟ್ಟುಕೊಂಡರೆ ತಲೆಬಿಸಿ ಕಡಿಮೆಯಾಗುತ್ತದೆ. ಮಾಡುವುದಕ್ಕೂ ಅಷ್ಟೇನೂ ಕಷ್ಟವಿಲ್ಲ ಈ ತಿನಿಸು. ಮಾಡುವ ವಿಧಾನ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಬೇಕಾಗುವ ಸಾಮಾಗ್ರಿಗಳು: ಗಟ್ಟಿ ಅವಲಕ್ಕಿ-3ಕಪ್, 1 ಕಪ್- ಕಡಲೇಬೀಜ, 1-ಕಪ್ –ಹುರಿಕಡಲೆ, ಬೆಳ್ಳುಳ್ಳಿ-15 ಎಸಳು ಸ್ವಲ್ಪ ಜಜ್ಜಿಕೊಂಡಿದ್ದು, 15-ಬ್ಯಾಡಗಿ ಮೆಣಸು, ½ ಕಪ್ –ಒಣಕೊಬ್ಬರಿ ಚಿಕ್ಕದ್ದಾಗಿ ಕತ್ತರಿಸಿಕೊಂಡಿರಬೇಕು, 2 ಚಮಚ-ಅಚ್ಚ ಖಾರದ ಪುಡಿ,1 ಟಿ ಸ್ಪೂನ್-ಅರಿಶಿನ, ಚಿಟಿಕೆ-ಇಂಗು, 1 ಟೀ ಸ್ಪೂನ್ –ಸಾಸಿವೆ, ಕರಿಬೇವು-4 ದಂಟು, ಎಣ್ಣೆ-ಕರಿಯಲು, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮೊದಲಿಗೆ ಅಗಲವಾದ ಒಂದು ಬಾಣಲೆಗೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಗ್ಯಾಸ್ ಮೇಲೆ ಇಡಿ. ಎಣ್ಣೆ ಸರಿಯಾಗಿ ಬಿಸಿಯಾಗಲಿ. ಸ್ವಲ್ಪ ಸ್ವಲ್ಪವೇ ಅವಲಕ್ಕಿಯನ್ನು ಎಣ್ಣೆ ಬಾಣಲೆಗೆ ಹಾಕಿ ಎತ್ತಿಟ್ಟುಕೊಳ್ಳಿ. ನಂತರ ಕಡಲೇಕಾಯಿ ಬೀಜವನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ಇದನ್ನು ಅವಲಕ್ಕಿ ಹುರಿದಿಟ್ಟುಕೊಂಡ ಪಾತ್ರೆಗೆ ಹಾಕಿ. ಇದಾದ ನಂತರ ಬೆಳ್ಳುಳ್ಳಿಯನ್ನು ಹುರಿದು ಎತ್ತಿಟ್ಟುಕೊಳ್ಳಿ.
ಇದಾದ ನಂತರ ಒಣಕೊಬ್ಬರಿಯನ್ನು, ಬ್ಯಾಡಗಿ ಮೆಣಸು, ಹುರಿಕಡಲೆ, ಕರಿಬೇವು ಎಲ್ಲವನ್ನು ಬೇರೆ ಬೇರೆಯಾಗಿ ಹುರಿದುಕೊಂಡು ಇದನ್ನು ಅವಲಕ್ಕಿ ಇರುವ ಪಾತ್ರೆಗೆ ಹಾಕಿ. ನಂತರ ಅವಲಕ್ಕಿಗೆ ಖಾರದ ಪುಡಿ, ಉಪ್ಪು, ಅರಿಶಿನ, ಸೇರಿಸಿ. ನಂತರ ಗ್ಯಾಸ್ ಮೇಲೆ ಒಗ್ಗರಣೆ ಮಾತ್ರೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು ಹಾಕಿ ಹುರಿದುಕೊಂಡು ಈ ಒಗ್ಗರಣೆಯನ್ನು ಅವಲಕ್ಕಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.