ದಿನಾ ಅನ್ನ ಸಾರು ತಿಂದು ಬೇಜಾರು ಆದಾಗ ಅಥವಾ ಸಾಂಬಾರು ಮಾಡುವುದಕ್ಕೆ ಸಮಯವಿಲ್ಲದೇ ಇದ್ದಾಗ ಫಟಾಫಟ್ ಆಗಿ ಈ ಟೊಮೆಟೋ ಬಾತ್ ಅನ್ನು ತಯಾರು ಮಾಡಬಹುದು. ರುಚಿಕರವಾಗಿರುವುದರ ಜತೆಗೆ ಕಡಿಮೆ ಸಮಯದಲ್ಲಿ ಇದನ್ನು ಮಾಡಿಬಿಡಬಹುದು.
ಬೇಕಾಗುವ ಸಾಮಾಗ್ರಿ: 3 ಟೊಮೆಟೊ ಹಣ್ಣು, 2 ಕಪ್ ಅಕ್ಕಿ, 2 ಚಮಚ ಎಣ್ಣೆ/ತುಪ್ಪ, 3 ಹಸಿಮೆಣಸು, 1 ದೊಡ್ಡ ಈರುಳ್ಳಿ, ಹಸಿಬಟಾಣಿ 3 ಟೇಬಲ್ ಸ್ಪೂನ್, 4 ಗ್ಲಾಸ್ ನೀರು, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ½ ಇಂಚು ಶುಂಠಿ, 5 ಎಸಳು ಬೆಳ್ಳುಳ್ಳಿ, ಕೊತ್ತಂಬರಿ ಪುಡಿ-2 ಚಮಚ, ಖಾರದಪುಡಿ-1ಚಮಚ, ಅರಿಶಿನ-ಸ್ವಲ್ಪ, ಪುದೀನಾ ಎಲೆ-10, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲಿಗೆ ಒಂದು ಸಣ್ಣ ಫೀಸ್ ಚಕ್ಕೆ, 1 ಏಲಕ್ಕಿ, 1 ಲವಂಗ, ಶುಂಠಿ, ಬೆಳ್ಳುಳ್ಳಿ ಇವನ್ನೆಲ್ಲಾ ಒಟ್ಟು ಸೇರಿಸಿ ಶುಂಠಿ, ಬೆಳ್ಳುಳ್ಳಿಯನ್ನು ಜಜ್ಜುವ ಕಲ್ಲಿನಲ್ಲಿ ಜಜ್ಜಿಕೊಳ್ಳಿ. ನಂತರ ಇದಕ್ಕೆ ಹಸಿಮೆಣಸು ಹಾಕಿ ತರಿತರಿಯಾಗಿ ಜಜ್ಜಿಕೊಳ್ಳಿ. ಕುಕ್ಕರ್ ಗೆ ಎಣ್ಣೆ/ತುಪ್ಪ ಹಾಕಿ. ಇದು ಬಿಸಿಯಾದ ಮೇಲೆ 1 ಚಕ್ಕೆ, 1 ಲವಂಗ, 1 ಏಲಕ್ಕಿ, ಪಲಾವ್ ಎಲೆ ಹಾಕಿ. ನಂತರ ಉದ್ದಕ್ಕೆ ಸೀಳಿಕೊಂಡ ಈರುಳ್ಳಿ ಹಾಕಿ ಪ್ರೈ ಮಾಡಿಕೊಳ್ಳಿ. ಇದಕ್ಕೆ ಜಜ್ಜಿಕೊಂಡ ಶುಂಠಿ ಬೆಳ್ಳುಳ್ಳಿಯ ಮಸಾಲ ಹಾಕಿ 1 ನಿಮಿಷ ಪ್ರೈ ಮಾಡಿ. ನಂತರ ಇದಕ್ಕೆ ಟೊಮೆಟೊ ಹಾಗೂ ಹಸಿಬಟಾಣಿಕಾಳು ಹಾಕಿ ಪ್ರೈ ಮಾಡಿ.
ಟೊಮೆಟೊ ಮೆತ್ತಗಾದ ನಂತರ ಕೊತ್ತಂಬರಿ ಪುಡಿ, ಖಾರದಪುಡಿ, ಅರಿಶಿನ, ಕೊತ್ತಂಬರಿ, ಪುದೀನಾ ಸೊಪ್ಪು ಹಾಕಿ 2 ನಿಮಿಷಗಳ ಕಾಲ ಹುರಿಯಿರಿ. ನಂತರ ನೀರು ಸೇರಿಸಿ. ನೀರು ಕುದಿಯಲು ಆರಂಭಿಸಿದಾಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಅಕ್ಕಿ ಹಾಕಿ 2 ವಿಷಲ್ ಬರಿಸಿದರೆ ರುಚಿಕಟ್ಟಾದ ಟೊಮೆಟೊ ಬಾತ್ ಸವಿಯಲು ಸಿದ್ಧ.