ಕೂದಲು ಉದ್ದವಿದ್ದರೂ ಸರಿ, ಚಿಕ್ಕದಾಗಿದ್ದರೂ ಸರಿ, ಕೂದಲ ಸೊಬಗು ಹೆಚ್ಚುವುದೇ ಅದು ಆರೋಗ್ಯವಾಗಿದ್ದಾಗ ಮಾತ್ರ.
ಹೀಗಾಗಿ ಕೂದಲಿಗೆ ಸೂಕ್ತವಾದ ಆರೈಕೆ ಅಗತ್ಯ. ಅದು ಯಾವ ರೀತಿ ಅಂತ ತಿಳಿಯೋಣ.
* ಕೂದಲ ಹೊಳಪಿಗಾಗಿ ಮೊಟ್ಟೆ ಹೆಚ್ಚು ಉಪಯುಕ್ತ. ಇದರಲ್ಲಿರುವ ಪ್ರೊಟೀನ್, ಕಬ್ಬಿಣ ಅಂಶ ಕೂದಲ ಪೋಷಣೆಗೆ ಸಹಕಾರಿ. ಮೊಟ್ಟೆಯ ಬಿಳಿ ಭಾಗಕ್ಕೆ 1 ಚಮಚ ಆಲೀವ್ ಎಣ್ಣೆ ಮತ್ತು ಜೇನನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲ ಬುಡ ಹಾಗೂ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಳಿಕ ತೊಳೆಯಬೇಕು.
* ಲೋಳೆಸರ ಕೂದಲನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ನಾಲ್ಕು ಚಮಚಗಳಷ್ಟು ಲೋಳೆಸರದ ತಿರುಳಿಗೆ ಎರಡು ಚಮಚದಷ್ಟು ಕೊಬ್ಬರಿ ಎಣ್ಣೆ, ಮೂರು ಚಮಚ ಮೊಸರು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನು ಕೂದಲಿಗೆ ಹಚ್ಚಿ ಅರ್ಧಗಂಟೆಯ ಬಳಿಕ ಸ್ವಚ್ಛಗೊಳಿಸಬೇಕು.
* ಕೊಬ್ಬರಿ ಎಣ್ಣೆಗೆ ಸ್ವಲ್ಪ ಕರಿಬೇವು ಹಾಕಿ ಬಿಸಿ ಮಾಡಿ ಕೂದಲು ಹಾಗೂ ಬುಡಕ್ಕೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಿದರೆ ಉತ್ತಮ ಫಲಿತಾಂಶ ಹೊಂದಬಹುದು.
* ಎರಡು ಕಪ್ ಬಿಸಿ ನೀರಿಗೆ ಎರಡು ಚಮಚಗಳಷ್ಟು ಜೇನನ್ನು ಬೆರೆಸಬೇಕು. ನೀರನ್ನು ಸ್ಪ್ರೇ ಮಾಡುವ ಬಾಟಲಿಗೆ ಹಾಕಿಕೊಂಡು ಸ್ನಾನವಾದ ಬಳಿಕ ಇಡೀ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಬೇಕು. ನಂತರ ಐದು ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ಬಳಿಕ ಮತ್ತೆ ಕೂದಲನ್ನು ತೊಳೆಯಬೇಕು.