ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಲ್ಲುಜ್ಜುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಹೃದಯ ಬಡಿತ ಏರುಪೇರಾಗದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ ಹೃದಯಾಘಾತದ ಅಪಾಯ ಸಹ ಕಡಿಮೆ ಅನ್ನೋದು ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಲ್ಲಿ ಬೆಳಕಿಗೆ ಬಂದಿದೆ.
ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳದೇ ಇದ್ರೆ ಆ ಬ್ಯಾಕ್ಟೀರಿಯಾಗಳು ರಕ್ತ ಸೇರುತ್ತವೆ. ಇದರಿಂದಲೇ ಉರಿಯೂತ ಕಾಣಿಸಿಕೊಳ್ಳುತ್ತದೆ ಅಂತಾ ದಕ್ಷಿಣ ಕೊರಿಯಾದ ವೈದ್ಯರ ತಂಡ ಅಭಿಪ್ರಾಯಪಟ್ಟಿದೆ. ಈ ಉರಿಯೂತ ಹೃದಯ ಬಡಿತದ ಏರಿಳಿತ ಹಾಗೂ ಹೃದಯಾಘಾತಕ್ಕೂ ಕಾರಣವಾಗಬಲ್ಲದು.
ಹೃದಯದ ಆರೋಗ್ಯಕ್ಕೂ ಹಲ್ಲುಜ್ಜುವ ಕ್ರಿಯೆಗೂ ಸಂಬಂಧವಿದೆ ಅನ್ನೋದನ್ನು ಪತ್ರಿಕೆಯೊಂದರಲ್ಲಿ ಪ್ರಕಟವಾದ ಸಂಶೋಧನಾ ಲೇಖನದಲ್ಲಿ ಸ್ಪಷ್ಟಪಡಿಸಲಾಗಿತ್ತು. 40-79 ವರ್ಷ ವಯಸ್ಸಿನ ಸುಮಾರು 161,286 ಜನರನ್ನು ಪರೀಕ್ಷೆಗೆ ಒಳಪಡಿಸಿದ ತಜ್ಞ ವೈದ್ಯರು ಈ ವಿಚಾರವನ್ನು ಬಹಿರಂಗಪಡಿಸಿದ್ದರು.
ದಿನಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಹಲ್ಲುಜ್ಜಿದ್ರೆ ಹೃದಯ ಬಡಿತ ಏರುಪೇರಾಗುವ ಅಪಾಯ ಶೇ.10 ರಷ್ಟು ಕಡಿಮೆಯಾಗುತ್ತದೆ. ಹೃದಯಾಘಾತದ ಸಾಧ್ಯತೆ ಕೂಡ ಶೇ.12 ರಷ್ಟು ಕಡಿಮೆಯಾಗಲಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ನಿಮ್ಮ ಹಲ್ಲುಗಳನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ.