ಹಲ್ಲು ನೋವಿನಿಂದ ಬಳಲಿರುವ ಪ್ರತಿಯೊಬ್ಬರಿಗೂ ಅದರ ನೋವಿನ ಬಗ್ಗೆ ತಿಳಿದೇ ಇದೆ. ಈ ನೋವಿನಿಂದ ಹೊರಬರಲು ತುಂಬಾ ಕಷ್ಟಪಡಬೇಕಾಗುತ್ತದೆ. ಆದರೆ ಹಲ್ಲಿಗಿಂತ ಮೊದಲು ಒಸಡಿನ ನೋವು ಕಾಣಿಸಿಕೊಳ್ಳುತ್ತದೆ.
ಒಸಡು ಊದಿಕೊಳ್ಳುವುದು, ರಕ್ತ ಬರುವುದು ಇತ್ಯಾದಿ ಒಸಡಿನ ನೋವಿನ ಸಮಸ್ಯೆಗಳಾಗಿವೆ. ಬಾಯಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಇತರ ಕೀಟಾಣುಗಳು ಉಂಟು ಮಾಡುವಂತಹ ಸೋಂಕಿನಿಂದಾಗಿ ಒಸಡಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಈ ಸಮಸ್ಯೆಗೆ ಹೆಚ್ಚು ಚಿಂತೆ ಮಾಡಬೇಕಿಲ್ಲ. ಸೋಂಕನ್ನು ತಡೆದು ನೋವನ್ನು ಕಡಿಮೆ ಮಾಡಬಲ್ಲ ಮನೆ ಮದ್ದಿನ ವಿವರ ಇಲ್ಲಿದೆ.
ಅರಿಶಿಣ
ಒಂದು ಚಮಚ ಅರಿಶಿಣವನ್ನು ನೀರಿನೊಂದಿಗೆ ಕಲಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ನಿಂದ ದಿನವೂ ಹಲ್ಲುಜ್ಜುತ್ತಾ ಇದ್ದರೆ ಸೋಂಕು ರಹಿತ ಬಾಯಿ ನಿಮ್ಮದಾಗುತ್ತದೆ.
ಉಪ್ಪು ನೀರು
ಒಸಡಿನಲ್ಲಿರುವ ನೋವು ಮತ್ತು ಊತವನ್ನು ಕಡಿಮೆ ಮಾಡಬೇಕಾದರೆ ಉಪ್ಪಿನ ನೀರಿನಿಂದ ಬಾಯಿ ತೊಳೆದುಕೊಳ್ಳಿ. ಒಸಡಿನ ಸೋಂಕನ್ನು ನಿವಾರಣೆ ಮಾಡಲು ದಿನದಲ್ಲಿ ಮೂರರಿಂದ ನಾಲ್ಕು ಸಲ ಹೀಗೆ ಮಾಡಿ. ಉಪ್ಪಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ನೋವಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತೊಡೆದು ಹಾಕುತ್ತದೆ.
ಬೇವು
ಒಸಡಿನ ಸಮಸ್ಯೆ ನಿವಾರಣೆ ಮಾಡಲು ಬೇವಿನ ಎಲೆಗಳನ್ನು ಜಗಿಯಬಹುದು. ಇದರಿಂದ ಹಲ್ಲು ಗುಳಿ ಬೀಳುವುದನ್ನು ತಡೆಯಬಹುದು ಮತ್ತು ಬಾಯಿಯ ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳಬಹುದು. ಒಣಗಿಸಿ ಪುಡಿ ಮಾಡಿದ ಬೇವಿನ ಎಲೆಗಳನ್ನು ಅಡುಗೆ ಸೋಡಾ ಮತ್ತು ನೀರಿನೊಂದಿಗೆ ಹಾಕಿ ಮೌಥ್ ವಾಶ್ ಮಾಡಿಕೊಳ್ಳಬಹುದು. ಒಸಡಿನ ನೋವು ನಿವಾರಣೆ ಮಾಡಿಕೊಳ್ಳಲು ಇದನ್ನು ನಿಯಮಿತವಾಗಿ ಬಳಸಿ.
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಒಸಡಿನ ನೋವನ್ನು ನಿವಾರಿಸುವಂತಹ ಗುಣಗಳು ಇವೆ. ಇದರಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು ಮತ್ತು ಅದು ಕೆಟ್ಟ ಮಟ್ಟಕ್ಕೆ ಹೋಗದಂತೆ ತಡೆಯುತ್ತದೆ.