ಶ್ವೇತ ವರ್ಣದ ಉಡುಪನ್ನು ನಿರ್ವಹಣೆ ಮಾಡುವುದು ತುಸು ಕಷ್ಟದ ಕೆಲಸವೇ. ಅದರಲ್ಲೂ ಮಳೆ ಬಂತು ಅಂದ್ರೆ ಮುಗಿದೇಹೋಯಿತು. ಹೀಗಾಗಿ ಮಳೆಗಾಲದಲ್ಲಿ ಬಿಳಿ ಬಟ್ಟೆಗಳನ್ನು ತೊಡಲು ಹೆಚ್ಚಾಗಿ ಯಾರೂ ಇಷ್ಟಪಡುವುದಿಲ್ಲ.
ಶ್ವೇತ ವರ್ಣದ ಉಡುಪುಗಳನ್ನು ಹೇಗೆ ಮೆಂಟೇನ್ ಮಾಡಬೇಕು ಅನ್ನುವ ಟಿಪ್ಸ್ ಇಲ್ಲಿದೆ.
* ಮಳೆಗಾಲದಲ್ಲಿ ಬಿಳಿ ಸೀರೆಗಳನ್ನು ಹೆಚ್ಚು ಉದ್ದವಾಗಿ ಉಡಬಾರದು. ಹೀಗೆ ಮಾಡುವುದರಿಂದ ಸೀರೆಯ ಅಂಚು ನೆಲಕ್ಕೆ ತಾಗುವುದಿಲ್ಲ. ಹಾಗೂ ಕೆಸರು ಅಂಟುವುದಿಲ್ಲ.
* ಬಿಳಿ ಬಟ್ಟೆಗಳಿಗೆ ಸಣ್ಣ ಪುಟ್ಟ ಕಲೆಗಳಾಗಿದ್ದರೆ, ಕಲೆಗಳ ಮೇಲೆ ಟಾಲ್ಕಂ ಪೌಡರನ್ನು ಸವರಿ, ಅದರ ಮೇಲೆ ಬ್ಲಾಟಿಂಗ್ ಪೇಪರನ್ನಿಟ್ಟು ಚೆನ್ನಾಗಿ ತಿಕ್ಕಿದರೆ, ಕಲೆಗಳು ನಾಶವಾಗುತ್ತವೆ.
* ಬಿಳಿ ಬಟ್ಟೆಗಳನ್ನು ವಾಷಿಂಗ್ ಮೆಶಿನ್ ನಲ್ಲಿ ಒಗೆಯುವ ಮುನ್ನ ಶರ್ಟ್ನ ಕೈ ತೋಳು, ಕಂಕುಳು, ಕಾಲರ್ ಭಾಗವನ್ನು ಮೊದಲೇ ಬ್ರಷ್ನಿಂದ ಉಜ್ಜಿ ಆನಂತರ ಒಗೆಯಲು ಹಾಕಬೇಕು.
* ಅಪರೂಪವಾಗಿ ಬಳಸುವ ಬಟ್ಟೆಗಳ ನಡುವೆ ಕರ್ಪೂರದ ಉಂಡೆಗಳನ್ನಿಟ್ಟರೆ, ಬಟ್ಟೆಗಳು ಸುವಾಸನಾ ಭರಿತವಾಗಿರುತ್ತವೆ.
* ಗಾಢವಾದ ಕಲೆಯಾದಂತಹ ಜಾಗದಲ್ಲಿ ಆಲಿವ್ ಎಣ್ಣೆಯನ್ನಾಗಲೀ ಅಥವಾ ಕೊಬ್ಬರಿ ಎಣ್ಣೆಯನ್ನಾಗಲೀ ಹಚ್ಚಿ, ಸ್ವಲ್ಪ ಸಮಯದ ನಂತರ, ಬಿಸಿ ನೀರಿನಲ್ಲಿ ಸೋಪಿನಿಂದ ತೊಳೆದರೆ, ಕಲೆಗಳು ಸಂಪೂರ್ಣವಾಗಿ ನಾಶವಾಗುತ್ತವೆ.
* ಬೆವರಿನ ಕಲೆಗಳಿದ್ದರೆ, ನೀರಿಗೆ ನಿಂಬೆರಸವನ್ನು ಹಾಕಿ, ಆ ನೀರನ್ನು ಸ್ಪಂಜಿನಿಂದ ಕಲೆಯಿರುವ ಜಾಗದಲ್ಲಿ ಒರೆಸಿದರೆ, ಕಲೆಗಳು ಕಾಣಿಸುವುದಿಲ್ಲ.
* ಬಿಳಿ ಬಟ್ಟೆಗಳ ಮೇಲೆ ಕಬ್ಬಿಣದ ತುಕ್ಕುಗಳ ಕಲೆಯುಂಟಾಗಿದ್ದಲ್ಲಿ, ಕಲೆಯುಂಟಾದ ಜಾಗವನ್ನು ಮೊದಲು ಹಾಲಿನಲ್ಲಿ ಅದ್ದಬೇಕು. ನಂತರ ಅದರ ಮೇಲೆ ಪುಡಿ ಉಪ್ಪನ್ನು ಹಾಕಿ ಚೆನ್ನಾಗಿ ಉಜ್ಜಿ ನೀರಿನಿಂದ ತೊಳೆದರೆ ಕಲೆ ಮಾಯವಾಗುತ್ತದೆ.