ಮೇಕಪ್ ಏನಿದ್ದರೂ 16 ವರ್ಷ ದಾಟಿದವರು ಮಾಡಿಕೊಳ್ಳಬಹುದು. ಅದೂ ಅತೀ ಮೇಕಪ್ ಖಂಡಿತ ಮಾಡಿಕೊಳ್ಳಬಾರದು. ಯಾವಾಗಲಾದರೊಮ್ಮೆ ಮೇಕಪ್ ಮಾಡಿಕೊಂಡರೆ ಓಕೆ. ನಿತ್ಯ ಮೇಕಪ್ ಮಾಡಿಕೊಂಡರೆ ಚರ್ಮ ರಂಧ್ರಗಳೆಲ್ಲಾ ಮುಚ್ಚಿಹೋಗುತ್ತವೆ. ಸಮಸ್ಯೆಗಳೂ ಉಂಟಾಗುತ್ತವೆ.
ಚಿಕ್ಕ ಮಕ್ಕಳು ಕೇಳಿದರೆಂದು ಮೇಕಪ್ ಕಿಟ್ ಕೊಡಿಸಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಅದರಲ್ಲೂ ಸಾಮಾನ್ಯ ಕಂಪನಿಯ ಸೌಂದರ್ಯ ವರ್ಧಕಗಳನ್ನು ಬಳಸಿದರೆ ಚರ್ಮ ಹಾಳಾಗುತ್ತದೆ.
ಹಾಗಾಗಿ ಸಣ್ಣ ಮಕ್ಕಳು ಮೇಕಪ್ ಬಗೆಗೆ ಆಸಕ್ತಿ ವಹಿಸದಂತೆ ನೋಡಿಕೊಳ್ಳಿ. ಮೇಕಪ್ ಹಾಕಿಕೊಂಡರೆ ಬೇಗ ತೆಗೆಸುವುದರತ್ತ ಗಮನ ಕೊಡಿ. ಮಕ್ಕಳಿಗೆ ಕ್ಲೆನ್ಸರ್ ಬಳಸದೆ ಮೇಕಪ್ ತೆಗೆಯಬೇಕು. ಅದರಲ್ಲಿರುವ ರಾಸಾಯನಿಕಗಳು ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ.
ಒಂದು ವೇಳೆ ಕ್ಲೆನ್ಸರ್ ಹಾಕುವುದು ಅನಿವಾರ್ಯವಾದಲ್ಲಿ ತೆಳು ಕ್ಲೆನ್ಸರ್ ಉಪಯೋಗಿಸಬೇಕು. ಕೊಬ್ಬರಿ ಎಣ್ಣೆ ಇಲ್ಲವೇ ಬೇಬಿ ಆಯಿಲ್ ಬಳಸಿ ಮೇಕಪ್ ತೆಗೆದು ಕೂಡಲೇ ಮಾಯಿಶ್ಚರೈಸರ್ ಹಚ್ಚಬೇಕು. ಕೆಲವು ಚಿಕ್ಕ ಮಕ್ಕಳು ಅರಿಯದೆ ಸಾಬೂನಿನಿಂದ ಮುಖ ತೊಳೆದುಕೊಳ್ಳುತ್ತಿರುತ್ತಾರೆ. ಫೌಂಡೇಶನ್ ಮೇಕಪ್ ಇರುವಾಗ ಸಾಬೂನು ಬಳಸಬಾರದು. ಎಣ್ಣೆಯನ್ನು ಬಳಸಿ ಮುಖ ಸ್ವಚ್ಛಗೊಳಿಸಬೇಕು.
ಕೆಲವು ಮಕ್ಕಳು ಪದೇಪದೇ ವೈಪ್ಸ್ ಹಚ್ಚಿಕೊಳ್ಳುತ್ತಾರೆ. ಆ ಅಭ್ಯಾಸ ಬಿಡಿಸಬೇಕು. ಅದರಲ್ಲಿ ಆಲ್ಕೋಹಾಲ್ ಇರುತ್ತದೆ. ಅದರ ಪ್ರಭಾವ ಚರ್ಮದ ಮೇಲೆ ಬಿದ್ದು ಸುಕ್ಕು ಆಗುತ್ತದೆ. ಬದಲಿಗೆ ಕಾಟನ್ ಬಳಸಬೇಕು. ಸಣ್ಣ ಪ್ರಾಯದಲ್ಲೇ ಮಕ್ಕಳಿಗೆ ಚರ್ಮದ ರಕ್ಷಣೆ ಬಗ್ಗೆ ತಿಳಿ ಹೇಳಬೇಕು.
ಪ್ರತಿದಿನ ಮಲಗುವ ಮೊದಲು ಹಾಗೆ ಸ್ನಾನವಾದ ನಂತರ ಮಾಯಿಶ್ಚರೈಸರ್ ಹಚ್ಚುವುದನ್ನು ರೂಢಿ ಮಾಡಬೇಕು. ಒಣ ಚರ್ಮವಾಗಿದ್ದರೆ ಎಣ್ಣೆ ಆಧಾರಿತ ಕ್ರೀಮ್ ಬಳಸಬೇಕು. ಮಕ್ಕಳಿಗೆ ಪ್ರತ್ಯೇಕವಾದ ಸನ್ ಸ್ಕ್ರೀನ್ ಗಳು ಬಳಕೆಯಲ್ಲಿದೆ. ಎಸ್ ಪಿ ಎಫ್ 30ಕ್ಕಿಂತ ಕಡಿಮೆಯ ಸನ್ ಸ್ಕ್ರೀನ್ ಬಳಸಬೇಕು. ಅತ್ಯುತ್ತಮ ಲಿಪ್ ಬಾಮ್ ಮಾತ್ರ ಬಳಸಬೇಕು. ತಲೆಕೂದಲ ವಿಷಯದಲ್ಲೂ ಅಷ್ಟೇ. ಯಾವುದೇ ಕಾರಣಕ್ಕೂ ಡ್ರೈಯರ್ ಬಳಸಬಾರದು. ಇದರಿಂದ ಕೂದಲು ಕಾಂತಿ ಕಳೆದುಕೊಂಡು ದೊರಗಾಗಿ ಬದಲಾಗುತ್ತದೆ. ಆದ್ದರಿಂದ ಸಣ್ಣ ಪ್ರಾಯದಲ್ಲಿ ಜಾಗ್ರತೆ ವಹಿಸುವುದು ಮುಖ್ಯ.