ಕೆಲವು ಮಕ್ಕಳಿಗೆ ಸದಾ ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಅಂತಹ ಸಮಯದಲ್ಲಿ ಅವರಲ್ಲಿ ಅಗತ್ಯವಿರುವಷ್ಟು ರೋಗ ನಿರೋಧಕ ಶಕ್ತಿ ಇಲ್ಲ ಎಂದು ತಿಳಿಯಬೇಕು. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ ಜಿಂಕ್, ಕಬ್ಬಿಣ, ಕ್ಯಾಲ್ಸಿಯಂ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಎ ವಿಟಮಿನ್ ದೊರೆಯುವತ್ತ ಎಚ್ಚರಿಕೆ ವಹಿಸಬೇಕು.
ಅದು ದೃಷ್ಟಿಯನ್ನು ತೀಕ್ಷ್ಣಗೊಳಿಸುವುದಲ್ಲದೆ, ಮೂಳೆಗಳಲ್ಲಿ ಶಕ್ತಿ ಹೆಚ್ಚಿಸುತ್ತದೆ. ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸಲು ದಾರಿ ಮಾಡಿಕೊಡುತ್ತದೆ. ಆಟ – ಪಾಠಗಳಲ್ಲಿ ಮುಂದೆ ಇರುವಂತೆ ಅವರನ್ನು ಪ್ರೋತ್ಸಾಹಿಸುತ್ತದೆ.
ಹಾಲು, ಮೊಟ್ಟೆ, ಕ್ಯಾರೆಟ್, ಪಾಲಾಕ್, ಕುಂಬಳಕಾಯಿ, ಪರಂಗಿ, ಸಿಹಿ ಗೆಣಸು, ಪುಟ್ಟ ಧಾನ್ಯಗಳ ಮೂಲಕ ವಿಟಮಿನ್ ಎ ದೊರಕುತ್ತದೆ. ಮಕ್ಕಳು ತಿನ್ನಲು ಇಷ್ಟಪಡದೇ ಇದ್ದರೆ, ಆಕರ್ಷಕವಾಗಿ ಗೊಂಬೆಗಳ ಆಕಾರದಲ್ಲಿ, ಹೂಗಳ ರೂಪದಲ್ಲಿ ಹಸಿಯಾಗಿ ಕತ್ತರಿಸಿ ನೀಡಿದರೆ ಇಷ್ಟಪಟ್ಟು ತಿನ್ನುತ್ತಾರೆ.
ಮೊಟ್ಟೆಯಲ್ಲಿರುವ ಬಿಳಿ ಲೋಳೆಯನ್ನು ಯಾವ ರೂಪದಲ್ಲಿ ನೀಡಿದರೂ ಒಳ್ಳೆಯದೇ. ದೋಸೆ, ಇಡ್ಲಿ ಅಂತಹವುಗಳಲ್ಲಿ ಕ್ಯಾರೆಟ್, ಪಾಲಾಕ್ ಬೆರೆಸಿ ಮಾಡಿದರೆ ಮಕ್ಕಳ ಕಣ್ಣಿಗೆ ಆಕರ್ಷಕವಾಗಿ ಕಾಣುವುದಲ್ಲದೆ ದೇಹಕ್ಕೆ ಅಗತ್ಯವಾದ ವಿಟಮಿನ್ ಗಳು ದೊರಕುತ್ತವೆ.