ಕಾಳುಗಳು ಯಥೇಚ್ಛವಾದ ಪ್ರೊಟೀನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಸ್ವಾಭಾವಿಕ ಆಹಾರ. ಇದರಿಂದ ಯಾವುದೇ ಖಾದ್ಯ ತಯಾರಿಸಿದರೂ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು.
ಅದರಲ್ಲೂ ಹಲಸಂದೆ ಕಾಳಿನಲ್ಲಿ ತಯಾರಿಸುವ ಪದಾರ್ಥ ಟೇಸ್ಟಿಯಾಗಿರುತ್ತೆ. ಕಾಫಿ ಜೊತೆಗೆ ತಿನ್ನಲು ಹಲಸಂದೆ ವಡೆ ಬಲು ರುಚಿ.
ಬೇಕಾಗುವ ಸಾಮಗ್ರಿಗಳು : ಹಲಸಂದೆ ನೆನಸಿದ್ಧು 1 ಬಟ್ಟಲು, ಹಸಿಮೆಣಸಿನ ಕಾಯಿ 6, ಕೊತ್ತಂಬರಿ ಸೊಪ್ಪು ಸ್ವಲ್ಪ, ಕರಿಬೇವು ಸ್ವಲ್ಪ, ಶುಂಠಿ 1 ಇಂಚು ಹೆಚ್ಚಿದ್ದು, ಸಬ್ಬಸಿಗೆ ಸೊಪ್ಪು ಹೆಚ್ಚಿದ್ದು ಸ್ವಲ್ಪ ಹಾಗೂ ಕರಿಯಲು ಎಣ್ಣೆ.
ಮಾಡುವ ವಿಧಾನ : ನೆನೆಸಿದ ಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ. ಹಸಿಮೆಣಸಿನ ಕಾಯಿ, ಶುಂಠಿ, ಸಬ್ಬಸಿಗೆ ಸೊಪ್ಪು, ಉಪ್ಪು ಸೇರಿಸಿ ಸರಿಯಾಗಿ ರುಬ್ಬಿಕೊಳ್ಳಿ. ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವು ಸೇರಿಸಿ ಚೆನ್ನಾಗಿ ಕಲಸಿ. ಕಾದ ಎಣ್ಣೆಯಲ್ಲಿ ವಡೆಯನ್ನು ಕರಿದು ಸವಿಯಲು ಕೊಡಿ.