ನೇಪಾಳ ಒಂದು ಸುಂದರವಾದ ದೇಶ. ಹಿಮಾಲಯದ ತಪ್ಪಲಿನಲ್ಲಿ ಇರುವ ಈ ದೇಶದ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ಈ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಜೀವನದಲ್ಲಿ ಒಮ್ಮೆಯಾದರೂ ನೇಪಾಳದ ಈ ಸ್ಥಳಗಳನ್ನು ನೋಡಲೇ ಬೇಕು.
ನೇಪಾಳದ ಹಳೆಯ ಮತ್ತು ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದು ಪಶುಪತಿನಾಥ ದೇವಾಲಯ. ಇದು ರಾಜಧಾನಿ ಕಾಠ್ಮುಂಡುವಿಗೆ ಹತ್ತಿರದಲ್ಲಿದೆ. ಪಶುಪತಿ ಶಿವನ ದೇವಾಲಯವಾಗಿದ್ದು, ಇಲ್ಲಿ ಬಾಗಮತಿ ನದಿ ಹರಿಯುತ್ತದೆ.
ಕಾಠ್ಮುಂಡುವಿನಿಂದ 7 ಕಿ.ಮೀ. ದೂರದಲ್ಲಿದೆ ಬೌದ್ದನಾಥ. ಇದು ಪ್ರಮುಖ ಯಾತ್ರಾ ಕೇಂದ್ರ ಮತ್ತು ನೇಪಾಳದ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಟಿಬೇಟಿಯನ್ ಯಾತ್ರಾರ್ಥಿಗಳು ಇಲ್ಲಿ ಹೆಚ್ಚಾಗಿ ಭೇಟಿ ಕೊಡ್ತಾರೆ.
ನಾಗರ್ ಕೋಟ್ ಇದೂ ಕೂಡಾ ನೇಪಾಳದ ರಾಜಧಾನಿ ಕಾಠ್ಮುಂಡುವಿಗೆ ಹತ್ತಿರವಿದೆ. ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಇಲ್ಲಿ, ಸೋರ್ಯೋದಯ ಮತ್ತು ಸೂರ್ಯಾಸ್ತದ ಜೊತೆಗೆ ಹಿಮಾಲಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ನಿಸರ್ಗದತ್ತವಾಗಿಯೇ ನಿರ್ಮಾಣಗೊಂಡ, ಮಹೇಂದ್ರ ಗುಫಾ ಒಂದು ಸುಂದರ ಗುಹೆಯಾಗಿದೆ. ಇದರಲ್ಲಿ ಶಿವನ ವಿಗ್ರಹವಿದ್ದು, ಪ್ರವಾಸಿಗರನ್ನ ಆಕರ್ಷಿಸುತ್ತದೆ.
ನೇಪಾಳದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಮತ್ತೊಂದು ಬುದ್ಧನ ಜನ್ಮ ಸ್ಥಳ ಲುಂಬಿನಿ. ಕಪಿಲವಸ್ತು ಪ್ರದೇಶದಲ್ಲಿರುವ ಇದು ಧ್ಯಾನಕ್ಕೆ ಯೋಗ್ಯವಾದ ಸ್ಥಳವಾಗಿದೆ. ಇಲ್ಲಿ ಬೋದಿ ವೃಕ್ಷ, ಅಶೋಕನ ಪಿಲ್ಲರ್, ಬೌದ್ಧ ಸ್ತೂಪಗಳನ್ನು ಕಾಣಬಹುದಾಗಿದೆ.
ನೇಪಾಳದ ಮತ್ತೊಂದು ಸುಂದರ ಸ್ಥಳ ಸ್ವಯಂಬಹು ಮಂದಿರ. ಇದು ಶಂಕುವಿನಾಕಾರದ ಬೆಟ್ಟದ ಮೇಲಿದ್ದು, ನೇಪಾಳದ ಆಕರ್ಷಣೀಯ ಸ್ಥಳಗಳಲ್ಲೊಂದಾಗಿದೆ. ಇನ್ನು ಇದಕ್ಕೆ ಮಂಕಿ ದೇವಾಲಯವೆಂತಲೂ ಕರೆಯುತ್ತಾರೆ.
ದೇವಸ್ಥಾನ, ಚಾರಣ ಎಲ್ಲಾ ಮುಗಿದ ಮೇಲೆ ಶಾಪಿಂಗ್ ಮಾಡಬೇಕಲ್ಲ. ಇದಕ್ಕಾಗಿ ಥಾಮೆಲ್ ಏರಿಯಾ ಹೆಸರುವಾಸಿ. ಶಾಪಿಂಗ್ ಸ್ಟ್ರೀಟ್ ಅಂತಾನೆ ಹೆಸರು ವಾಸಿಯಾಗಿರುವ ಇಲ್ಲಿ ಬಟ್ಟೆ, ಆಭರಣಗಳನ್ನ ಕೊಳ್ಳಬಹುದು.
ಇನ್ನು ನೇಪಾಳದಲ್ಲಿ ಜನಪ್ರಿಯವಾಗಿರುವುದು ಅಂದರೆ ಅದು ಟೆರಾಕೋಟಾ ಮತ್ತು ಕರಕುಶಲ ಉತ್ಪನ್ನಗಳು. ಇವುಗಳನ್ನು ಕೊಳ್ಳಬೇಕು ಅಂದ್ರೆ ನೇಪಾಳದ ಭಕ್ತಾಪುರ ಅತ್ಯುತ್ತಮವಾಗಿದೆ. ಈ ಪ್ರದೇಶದಲ್ಲಿ ಶಾಪಿಂಗ್ ಮಾಡೋದೆ ಒಂದು ಖುಷಿ.
ಸೌಂದರ್ಯದ ಆಗರವಾಗಿರುವ ನೇಪಾಳವನ್ನು ವರ್ಣಿಸಲಸಾಧ್ಯ. ಹೀಗಾಗಿ ಒಮ್ಮೆ ಭೇಟಿ ಕೊಟ್ಟು ಕಣ್ತುಂಬಿಕೊಳ್ಳಲೇಬೇಕು.