ಬೇಸಿಗೆಯಲ್ಲಿ ಸೌಂದರ್ಯ ಕಾಪಾಡಿಕೊಳ್ಳೋದು ಬಹಳ ಕಷ್ಟ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗುತ್ತದೆ. ತುಟಿಗಳು ಸಹ ಕಪ್ಪಾಗಿ ಬಿಡುತ್ತವೆ. ತುಟಿಗಳು ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿರೋದ್ರಿಂದ ಹೆಚ್ಚಿನ ಕಾಳಜಿ ವಹಿಸಲೇಬೇಕು. ಸೂರ್ಯನ ಬಿಸಿಲಿನಿಂದ ತುಟಿಗಳನ್ನು ರಕ್ಷಿಸಿಕೊಳ್ಳೋದು ಹೇಗೆ ಅನ್ನೋದನ್ನು ನೋಡೋಣ.
ಪ್ರತಿದಿನ ಮಾಯಿಶ್ಚರೈಸರ್ ಹಚ್ಚಿ : ತುಟಿಗಳು ಒಣಗುವುದು ಚಳಿಗಾಲದಲ್ಲಿ ಮಾತ್ರ ಎಂಬ ಭಾವನೆ ತಪ್ಪು. ಬೇಸಿಗೆಯಲ್ಲಿ ಸಹ ತುಟಿಗಳು ಡ್ರೈ ಆಗಿಬಿಡುತ್ತವೆ. ಹಾಗಾಗಿ ಸೂಕ್ತವಾದ ಲಿಪ್ ಬಾಮ್ ಮತ್ತು ಮಾಯಿಶ್ಚರೈಸರ್ ಅನ್ನು ನಿಯಮಿತವಾಗಿ ಹಚ್ಚಿ.
ಎಸ್ ಪಿ ಎಫ್ ಇರುವ ಲಿಪ್ ಬಾಮ್ ಹಚ್ಚಿ : ಮುಖ, ಕತ್ತು ಮತ್ತು ಕೈಗಳಿಗೆ ಮಾತ್ರ ಎಸ್ ಪಿ ಎಫ್ ಅಗತ್ಯವಿದೆಯೆಂಬ ಭಾವನೆ ತಪ್ಪು. ತುಟಿಗಳ ಅಂದ ಕಾಪಾಡಿಕೊಳ್ಳಲು ಎಸ್ ಪಿ ಎಫ್ 15 ಇರುವ ಲಿಪ್ ಬಾಮ್ ಬಳಸುವುದು ಉತ್ತಮ.
ಬೆಳಗ್ಗೆ ತುಟಿಗಳನ್ನು ಉಜ್ಜಿ : ಪ್ರತಿದಿನ ಬೆಳಗ್ಗೆ ಹಲ್ಲುಜ್ಜಿದ ಬಳಿಕ, ಅದೇ ಬ್ರಶ್ ನಿಂದ ಮೃದುವಾಗಿ ತುಟಿಗಳನ್ನು ಸಹ ಉಜ್ಜಿಕೊಳ್ಳಿ. ಈ ರೀತಿ ಮಾಡುವುದರಿಂದ ತುಟಿಗಳ ಮೇಲಿನ ಡ್ರೈ ಸ್ಕಿನ್ ನಿವಾರಿಸಬಹುದು.
ವಾರಕ್ಕೊಮ್ಮೆ ಸ್ಕ್ರಬ್ ಬಳಸಿ : ಆಗಾಗ ಮುಖವನ್ನು ಸ್ಕ್ರಬ್ ನಿಂದ ಸ್ವಚ್ಛಗೊಳಿಸುತ್ತೀರಾ. ಅದೇ ರೀತಿ ವಾರಕ್ಕೊಮ್ಮೆ ತುಟಿಗಳಿಗೂ ಮಾಡಿಕೊಳ್ಳಿ. ಇದರಿಂದ ತುಟಿಗಳು ಮೃದುವಾಗಿ, ಕೆಂಪಗೆ ಹೊಳೆಯುತ್ತವೆ.
ವಿಟಮಿನ್ ಎ ಹೇರಳವಾಗಿರೋ ಆಹಾರ ಸೇವಿಸಿ : ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ವಿಟಮಿನ್ ಎ ಹೇರಳವಾಗಿರುವ ಆಹಾರವನ್ನು ಸೇವಿಸಬೇಕು. ಹಸಿರು ತರಕಾರಿಗಳು, ಟೊಮೆಟೋ, ಕ್ಯಾರೆಟ್, ಇಡಿಯಾದ ಧಾನ್ಯಗಳು ತುಟಿಗಳ ಸೌಂದರ್ಯವನ್ನು ಹೆಚ್ಚಿಸುತ್ತವೆ.