ಬೇಸಿಗೆಯಲ್ಲಿ ಎಲ್ಲರೂ ಉಸ್ಸಪ್ಪಾ ಅಂತಾರೆ. ಬೆವರಿಗೆ ಬೆಂಡಾಗುವವರೇ ಜಾಸ್ತಿ. ಬೆವರಿನ ದುರ್ವಾಸನೆ ಬೇರೆ. ಇದರಿಂದ ಮುಕ್ತಿ ಹೊಂದಲು ಇಲ್ಲಿದೆ ಕೆಲ ಟಿಪ್ಸ್.
ಪ್ರತಿದಿನ ವಾಕಿಂಗ್ ಮಾಡೋದ್ರಿಂದ ಶುದ್ಧ ಗಾಳಿ ಬ್ಯಾಕ್ಟೀರಿಯಾವನ್ನು ಕೊಲ್ಲುವುದಲ್ಲದೇ ನಿಮ್ಮನ್ನು ಆರೋಗ್ಯವಂತರನ್ನಾಗಿರಿಸುತ್ತದೆ.
ಸೂರ್ಯನ ಶಾಖದಿಂದ ಮುಕ್ತಿ ಹೊಂದಲು ಛತ್ರಿ ಒಳ್ಳೆಯದು. ಮನೆಯಿಂದ ಹೊರ ಬೀಳುವಾಗ ಛತ್ರಿ ಬಳಕೆ ಮಾಡಿ.
ಆದಷ್ಟು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ವೇಳೆಯಲ್ಲಿ ಹೊರಗೆ ಹೋಗೋದನ್ನು ತಪ್ಪಿಸಿ.
ಗಾಢ ಬಣ್ಣದ ಬಟ್ಟೆಯಿಂದ ದೂರವಿರಿ. ಲೈಟ್ ಕಲರ್ ಬಟ್ಟೆಯನ್ನು ಬೇಸಿಗೆಯಲ್ಲಿ ಹಾಕಿಕೊಳ್ಳಿ.
ಬಿಗಿಯಾದ ಬಟ್ಟೆ ಧರಿಸಬೇಡಿ. ರೇಯಾನ್, ಪಾಲಿಯೆಸ್ಟರ್ ಮತ್ತು ನೈಲಾನ್ ಬಟ್ಟೆ ಬೇಡ. ಕಾಟನ್ ಬಟ್ಟೆಯನ್ನು ಆದಷ್ಟು ಧರಿಸಿ.
ಒಣಗಿದ ಬಟ್ಟೆ, ಸಾಕ್ಸ್ ಬಳಸಿ. ಬಟ್ಟೆ ಒದ್ದೆಯಿದ್ದರೆ, ಅದರ ಜೊತೆ ಬೆವರು ಸೇರಿ ಕೆಟ್ಟ ವಾಸನೆ ಬರುತ್ತದೆ.
ದಿನದಲ್ಲಿ ಎರಡು ಬಾರಿಯಾದರೂ ಸ್ನಾನ ಮಾಡಿ, ಪಾದ, ಕುತ್ತಿಗೆ ಮತ್ತು ಒಳ ಭಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಅನಗತ್ಯ ಕೂದಲುಗಳನ್ನು ತೆಗೆದು ಹಾಕಿ. ಅನವಶ್ಯಕ ಕೂದಲಿದ್ದರೆ ಬ್ಯಾಕ್ಟೀರಿಯಾ ದಾಳಿ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ.
ಪಾದರಕ್ಷೆಗಳನ್ನು ಪ್ರತಿದಿನ ತೊಳೆದು, ಒಣ ಬಟ್ಟೆಯಲ್ಲಿ ಸ್ವಚ್ಛಗೊಳಿಸಿ.
ಬೆವರು ಜಾಸ್ತಿ ಬರುವ ನಿಮ್ಮ ದೇಹದ ಭಾಗಕ್ಕೆ ಅಡುಗೆ ಸೋಡಾ ಇಲ್ಲವೇ ನಿಂಬೆ ಪ್ಯಾಕ್ ಹಚ್ಚಿ.
ದೇಹದಿಂದ ಬರುವ ವಾಸನೆಯನ್ನು ಆಪಲ್ ಸೈಡರ್ ವಿನೆಗರ್ ಅಥವಾ ಬಿಳಿ ವಿನೆಗರ್ ಕಡಿಮೆ ಮಾಡುತ್ತದೆ. ಸಮುದ್ರದ ಉಪ್ಪು, ಆಲಿವ್ ಎಣ್ಣೆಯನ್ನು ಬಳಸಿ.
ಬೇವು ಮತ್ತು ತುಳಸಿ ಮ್ಯಾಜಿಕ್ ಮಾಡುವಂತಹವು. ಅವುಗಳ ಪ್ಯಾಕ್ ತಯಾರಿಸಿ ವಾರಕ್ಕೆ ಎರಡು ಬಾರಿ ಹಚ್ಚಬೇಕು. ಇವು ಬ್ಯಾಕ್ಟೀರಿಯಾ ದಾಳಿಯನ್ನು ನಿಯಂತ್ರಿಸುತ್ತದೆ.
ಮೆಗ್ನೀಸಿಯಮ್, ಸತು ಹಾಗೂ ಜೀವಸತ್ವ ಡಿ ಇರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹದಿಂದ ಬರುವ ಬೆವರು ವಾಸನೆ ಕಡಿಮೆಯಾಗುತ್ತದೆ.