HomeKarnatakaಯೋಗ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ ಮೋದಿ

ಯೋಗ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ ಮೋದಿ

ಬೆಂಗಳೂರು-ಯೋಗ ಕ್ಷೇತ್ರಕ್ಕೆ ಕರ್ನಾಟಕ ನೀಡಿರುವ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು,ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರನ್ನು ವಿಶೇಷವಾಗಿ ಉಲ್ಲೇಖಿಸಿದರು.

ಬೆಂಗಳೂರಿನ ಜಿಗಣಿ ಬಳಿಯ ಪ್ರಶಾಂತಿ ಕುಟೀರದಲ್ಲಿ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು,. ಐದು ದಶಕಗಳ ಪ್ರಶಾಂತಿ ಕುಟೀರದ ಪಯಣವು ಸೇವೆ, ಸಮರ್ಪಣೆ ಮತ್ತು ಯೋಗದ ಪ್ರಸಾರಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಯೋಗದ ಮಹತ್ವದ ಕುರಿತು ಮಾತನಾಡಿದ ಮೋದಿ, ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರನ್ನು ವಿಶೇಷವಾಗಿ ಉಲ್ಲೇಖಿಸಿ, ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೂ ಆರೋಗ್ಯಕರ ಜೀವನಶೈಲಿಗೆ ಒತ್ತು ನೀಡಿದ್ದ ಡಾ. ರಾಜ್‌ಕುಮಾರ್ ಅವರು ನಿತ್ಯ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಮಾಡುತ್ತಿದ್ದರು ಎಂದು ಮೋದಿ ಸ್ಮರಿಸಿದರು. ಯೋಗ ಕ್ಷೇತ್ರಕ್ಕೆ ಕರ್ನಾಟಕದ ಅನೇಕ ಮಹನೀಯರು ನೀಡಿರುವ ಕೊಡುಗೆ ಗಮನಾರ್ಹವಾಗಿದೆ ಎಂದು ಪ್ರಶಂಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಶಾಂತಿ ಕುಟೀರದೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದ ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ (ಹೆಚ್.ವಿ. ಶೇಷಾದ್ರಿ) ಅವರನ್ನೂ ಪ್ರಧಾನಿ ಸ್ಮರಿಸಿ,. ಸರಳತೆ, ವಿನಯ ಮತ್ತು ಸಮಾಜ ಸೇವೆಯ ಮನೋಭಾವಕ್ಕೆ ಶೇಷಾದ್ರಿ ಅವರು ಮಾದರಿಯಾಗಿದ್ದರು. ಜನರನ್ನು ಒಗ್ಗೂಡಿಸಿ ದೇಶ ಸೇವೆಗೆ ಸಿದ್ಧಪಡಿಸುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು ಎಂದು ಮೋದಿ ಹೇಳಿದರು. ಶೇಷಾದ್ರಿ ಅವರ ಪ್ರೀತಿ ಮತ್ತು ಮಾರ್ಗದರ್ಶನವನ್ನು ಹಲವು ವರ್ಷಗಳ ಕಾಲ ತಾವು ಪಡೆದಿದ್ದು, ಅವರೊಂದಿಗೆ ಕಳೆದ ಕ್ಷಣಗಳು ಇಂದಿಗೂ ಅಮೂಲ್ಯ ನೆನಪುಗಳಾಗಿವೆ ಎಂದು ಕೊಂಡಾಡಿದರು.

ಸಮಾಜಕ್ಕೆ ಎರಡೂ ಕೈಗಳಿಂದ ಕೊಟ್ಟರೆ ಸಮಾಜ ಲಕ್ಷಾಂತರ ಕೈಗಳಿಂದ ಮರಳಿ ನೀಡುತ್ತದೆ ಎಂಬ ಶೇಷಾದ್ರಿ ಅವರ ಮಾತನ್ನು ಪ್ರಧಾನಿ ಉಲ್ಲೇಖಿಸಿದರು. ಜನರ ಸೇವೆ ಮಾಡುವ ಸಂದರ್ಭದಲ್ಲಿ ಅವರ ಆಶೀರ್ವಾದ ದೊರೆತಿರುವುದು ತಮ್ಮ ಜೀವನದ ದೊಡ್ಡ ಆಸ್ತಿಗಳಲ್ಲೊಂದು ಎಂದು ಹೇಳಿದರು.

ಕಳೆದ 12 ವರ್ಷಗಳಲ್ಲಿ ಭಾರತ ತನ್ನ ಸಂಸ್ಕೃತಿ, ಜ್ಞಾನ ಮತ್ತು ವಿಜ್ಞಾನವನ್ನು ವಿಶ್ವದ ಮುಂದೆ ಆತ್ಮವಿಶ್ವಾಸದಿಂದ ಮಂಡಿಸುತ್ತಿದೆ. ಇದರ ಫಲವಾಗಿ ವಿಶ್ವದಾದ್ಯಂತ ಯೋಗದ ಜನಪ್ರಿಯತೆ ಹೆಚ್ಚಿದ್ದು, ಪ್ರತಿವರ್ಷ ವಿಶ್ವ ಯೋಗ ದಿನವನ್ನು ಅನೇಕ ರಾಷ್ಟ್ರಗಳು ಆಚರಿಸುತ್ತಿವೆ. ಯೋಗವು ಜಗತ್ತಿಗೆ ಭಾರತದ ಪರಿಚಯ ಮಾಡಿಸುವ ಪ್ರಮುಖ ಸೇತುವೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಸ್ವಾಮಿ ವಿವೇಕಾನಂದರಂತಹ ರಾಷ್ಟ್ರೀಯ ಆಧ್ಯಾತ್ಮಿಕ ನಾಯಕರ ಪ್ರೇರಣೆಯಿಂದ ಪ್ರಶಾಂತಿ ಕುಟೀರದಂತಹ ಸಂಸ್ಥೆಗಳು ಬೆಳೆದಿವೆ. ಯೋಗವನ್ನು ಜನಸಾಮಾನ್ಯರಿಗೆ ತಲುಪಿಸುವುದರ ಜೊತೆಗೆ ಆಧುನಿಕ ವೈಜ್ಞಾನಿಕ ಮಾನದಂಡಗಳ ಮೂಲಕ ಅದರ ಪರಿಣಾಮಕಾರಿತ್ವವನ್ನು ಪರಿಶೀಲಿಸುವ ಸಂಶೋಧನೆಯನ್ನೂ ಸಂಸ್ಥೆ ನಡೆಸಿದೆ ಎಂದು ಮೋದಿ ತಿಳಿಸಿದರು.

ಆಯುಷ್ ಕ್ಷೇತ್ರಕ್ಕೆ ಒತ್ತು

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಯೋಜನಗಳನ್ನು ಜನರಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಪ್ರತ್ಯೇಕ ಆಯುಷ್ ಸಚಿವಾಲಯ ಸ್ಥಾಪಿಸಲಾಗಿದ್ದು, ಆಯುಷ್ ಉತ್ಪನ್ನಗಳ ರಫ್ತು ಕೂಡ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು. ಅರಿಶಿನದ ಉತ್ಪಾದನೆ, ಗುಣಮಟ್ಟ ಮತ್ತು ರಫ್ತಿಗೆ ಉತ್ತೇಜನ ನೀಡಲು ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪಿಸಿರುವುದನ್ನೂ ಅವರು ಉಲ್ಲೇಖಿಸಿದರು.

ಮುಂದಿನ 25 ವರ್ಷಗಳಲ್ಲಿ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವ ಗುರಿಯೊಂದಿಗೆ 140 ಕೋಟಿ ಭಾರತೀಯರು ಮುನ್ನಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ಪ್ರಶಾಂತಿ ಕುಟೀರದೊಂದಿಗೆ ಮೋದಿಗೆ ಹಳೆಯ ನಂಟು

ಪ್ರಶಾಂತಿ ಕುಟೀರದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ವರ್ಷಗಳ ನಂಟಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದ ಅವರು ಯೋಗಾಭ್ಯಾಸ ಹಾಗೂ ಧ್ಯಾನದ ಕುರಿತು ಮಾರ್ಗದರ್ಶನ ಪಡೆದಿದ್ದರು. ಪ್ರಶಾಂತಿ ಕುಟೀರದ ಕುಲಪತಿ ಡಾ. ನಾಗೇಂದ್ರ ಅವರು ಮೋದಿಗೆ ಯೋಗಾಭ್ಯಾಸದ ಕುರಿತು ಮಾರ್ಗದರ್ಶನ ನೀಡಿದ್ದರು. ಪ್ರಧಾನಿಯಾದ ಬಳಿಕವೂ ಅವರು ಇಲ್ಲಿಗೆ ಭೇಟಿ ನೀಡಿದ್ದರು.

ಸುವರ್ಣ ಮಹೋತ್ಸವದ ಅಂಗವಾಗಿ ಪ್ರಶಾಂತಿ ಕುಟೀರದ ಆಡಳಿತಾತ್ಮಕ ಕಟ್ಟಡಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕೇರಳದ ತಿರುವನಂತಪುರಂನ ಎಸ್‌-ವ್ಯಾಸ ಸಂಸ್ಥೆಯ ನೂತನ ಕ್ಯಾಂಪಸ್‌ಗೂ ಚಾಲನೆ ನೀಡಲಾಯಿತು.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಪ್ರಶಾಂತಿ ಕುಟೀರದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ರಿಜ್ವಾನ್ ಅರ್ಷದ್, ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular