ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ತಮಾಷೆಯ ವರ್ತನೆಯ ಮೂಲಕ ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದ್ದಾರೆ. ಕವರ್ಸ್ ವಿಭಾಗದಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮಾಡಿದ ಕೊಹ್ಲಿ, ಎದುರಾಳಿ ಬ್ಯಾಟರ್ ರನ್ ಗಳಿಸುವುದನ್ನು ತಡೆದ ಬೆನ್ನಲ್ಲೇ ಮೈದಾನದಲ್ಲೇ ವಿಭಿನ್ನ ರೀತಿಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಪಂದ್ಯದ ವೇಳೆ ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೀಫರ್ಟ್ ಸಿಂಗಲ್ ರನ್ ಕದಿಯುವ ಉದ್ದೇಶದಿಂದ ಕವರ್ಸ್ ಕಡೆಗೆ ಚೆಂಡನ್ನು ಬಾರಿಸಿದ್ದರು. ಅಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ 38 ವರ್ಷದ ವಿರಾಟ್ ಕೊಹ್ಲಿ ಚಿರತೆಯಂತೆ ಜಿಗಿದು ಚೆಂಡನ್ನು ತಡೆದು ನಿಲ್ಲಿಸಿದರು. ಈ ಚುರುಕಿನ ಫೀಲ್ಡಿಂಗ್ ನಿಂದಾಗಿ ಸೀಫರ್ಟ್ ರನ್ ಗಳಿಸುವ ಅವಕಾಶ ವಂಚಿತರಾದರು. ಆದರೆ ಚೆಂಡನ್ನು ತಡೆದ ತಕ್ಷಣ ಕೊಹ್ಲಿ ನೀಡಿದ ಪ್ರತಿಕ್ರಿಯೆ ಇಡೀ ಮೈದಾನದಲ್ಲಿ ನಗೆಯ ಅಲೆ ಎಬ್ಬಿಸಿತು.
ಚೆಂಡನ್ನು ತಡೆದ ಖುಷಿಯಲ್ಲಿ ಕೊಹ್ಲಿ ತಕ್ಷಣವೇ ತಮಾಷೆಯಾಗಿ ಹೆಜ್ಜೆ ಹಾಕಲು ಶುರುಮಾಡಿದರು. ಅವರ ಈ ಅನಿರೀಕ್ಷಿತ ಡ್ಯಾನ್ಸ್ ಸ್ಟೆಪ್ಸ್ ಕಂಡು ಸಹ ಆಟಗಾರರು ಕೂಡ ನಗೆಗಡಲಲ್ಲಿ ತೇಲಿದರು. ಸಾಮಾನ್ಯ ಫೀಲ್ಡಿಂಗ್ ಪ್ರಯತ್ನವೊಂದನ್ನು ಕೊಹ್ಲಿ ತಮ್ಮದೇ ಶೈಲಿಯಲ್ಲಿ ಮನರಂಜನಾತ್ಮಕ ಕ್ಷಣವನ್ನಾಗಿ ಬದಲಾಯಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಕೊಹ್ಲಿಯ ಉತ್ಸಾಹಕ್ಕೆ ಫಿದಾ ಆಗಿದ್ದಾರೆ.
ವಯಸ್ಸು 38 ಆದರೂ ಮೈದಾನದಲ್ಲಿ ವಿರಾಟ್ ಕೊಹ್ಲಿ ತೋರುವ ಚೈತನ್ಯ ಯುವ ಆಟಗಾರರಿಗೂ ಮಾದರಿಯಾಗಿದೆ. ಅದ್ಭುತ ಕ್ಯಾಚ್ ಹಿಡಿಯುವುದಿರಲಿ ಅಥವಾ ಸಣ್ಣ ರನ್ ತಡೆಯುವುದಿರಲಿ, ತಂಡದಲ್ಲಿ ಸದಾ ಲವಲವಿಕೆ ತುಂಬಲು ಕೊಹ್ಲಿ ಮುಂದಿರುತ್ತಾರೆ. ಇನ್ನು ಐದು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಮಳೆಯಿಂದ ರದ್ದಾಗಿದ್ದ ಕಾರಣ, ನಾಲ್ಕನೇ ಪಂದ್ಯದಲ್ಲಿ ಟಾಸ್ ಗೆದ್ದ ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

