ನೀವು ಬೈಕ್ ಅಥವಾ ಕಾರಿನಲ್ಲಿ ಆರಾಮವಾಗಿ ಹೋಗುತ್ತಿರುವಾಗ ದಿಢೀರನೆ ಟ್ರಾಫಿಕ್ ಪೊಲೀಸರು ಕೈ ತೋರಿಸಿ ನಿಲ್ಲಿಸಿದರೆ ಒಮ್ಮೆ ಆತಂಕವಾಗುವುದು ಸಹಜ. ಅದರಲ್ಲೂ ಹೆಲ್ಮೆಟ್ ಧರಿಸಿಲ್ಲ ಅಥವಾ ಸಂಚಾರ ನಿಯಮ ಉಲ್ಲಂಘಿಸಿದ್ದೀರಿ ಎಂದು ಹೇಳಿ ಪೊಲೀಸರು ನಿಮ್ಮ ವಾಹನದ ಕೀ ತೆಗೆದುಕೊಂಡರೆ ಏನು ಮಾಡಬೇಕು ಎಂಬ ಗೊಂದಲ ಕಾಡಬಹುದು. ಇಂತಹ ಸಂದರ್ಭದಲ್ಲಿ ಪೊಲೀಸರ ವಿರುದ್ಧ ವಾದಕ್ಕೆ ಇಳಿಯಬೇಕೇ? ಅವರು ನಿಮ್ಮ ವಾಹನದ ಕೀ ಕಸಿದುಕೊಳ್ಳುವ ಅಧಿಕಾರ ಹೊಂದಿದ್ದಾರೆಯೇ? ವಾಹನ ಸವಾರರಿಗೆ ಕಾನೂನು ನೀಡಿರುವ ಹಕ್ಕುಗಳೇನು? ಈ ಬಗ್ಗೆ ಪ್ರತಿಯೊಬ್ಬ ವಾಹನ ಸವಾರರೂ ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ನಿಯಮಗಳಿವೆ.
ಟ್ರಾಫಿಕ್ ಪೊಲೀಸರು ವಾಹನದ ಕೀ ಕಸಿದುಕೊಳ್ಳಬಹುದೇ?
ಮೋಟಾರು ವಾಹನ ಕಾಯ್ದೆಯ ಪ್ರಕಾರ, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ತಕ್ಷಣವೇ ಪೊಲೀಸರು ನಿಮ್ಮ ಬೈಕ್ ಅಥವಾ ಕಾರಿನ ಕೀಗಳನ್ನು ಬಲವಂತವಾಗಿ ಕಸಿದುಕೊಳ್ಳಲು ಸಾಮಾನ್ಯವಾಗಿ ಅಧಿಕಾರ ಹೊಂದಿಲ್ಲ. ವಾಹನವನ್ನು ನಿಲ್ಲಿಸುವಂತೆ ಸೂಚಿಸುವ ಅಧಿಕಾರ ಪೊಲೀಸರಿಗೆ ಇದೆ. ಆದರೆ ಕೀಗಳನ್ನು ಬಲವಂತವಾಗಿ ತೆಗೆದುಕೊಳ್ಳುವುದು ನಿಯಮಬಾಹಿರ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಪೊಲೀಸರು ನಿಮ್ಮ ವಾಹನದ ಕೀಗಳನ್ನು ತೆಗೆದುಕೊಂಡರೆ, ಯಾವುದೇ ರೀತಿಯ ವಾಗ್ವಾದಕ್ಕೆ ಇಳಿಯಬೇಡಿ. ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸಿ. ಸಾಧ್ಯವಾದರೆ ಘಟನೆಯನ್ನು ವಿಡಿಯೋದಲ್ಲಿ ದಾಖಲಿಸಿ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಬಹುದು.
ಚಲನ್ ವಿಧಿಸುವ ಅಧಿಕಾರ ಯಾರಿಗಿದೆ?
ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಪೊಲೀಸರು ದಂಡ ವಿಧಿಸಬಹುದು. ಆದರೆ ಪ್ರತಿಯೊಬ್ಬ ಟ್ರಾಫಿಕ್ ಸಿಬ್ಬಂದಿಗೂ ಚಲನ್ ನೀಡುವ ಅಧಿಕಾರ ಇರುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಹಾಯಕ ಪೊಲೀಸ್ ಉಪನಿರೀಕ್ಷಕ (ASI), ಪೊಲೀಸ್ ಉಪನಿರೀಕ್ಷಕ (SI) ಮತ್ತು ಇನ್ಸ್ಪೆಕ್ಟರ್ ಹಂತದ ಅಧಿಕಾರಿಗಳು ಚಲನ್ ನೀಡುವ ಅಧಿಕಾರ ಹೊಂದಿರುತ್ತಾರೆ ಎಂದು ಹೇಳಲಾಗಿದೆ. ದಂಡ ಪಾವತಿಸುವಾಗ ಅಧಿಕೃತ ಚಲನ್ ಅಥವಾ ರಸೀದಿ ಪಡೆಯುವುದು ಮುಖ್ಯ. ಡಿಜಿಟಲ್ ಚಲನ್ ಆಗಿದ್ದರೆ ಅದರ ವಿವರಗಳನ್ನು ಪರಿಶೀಲಿಸಬೇಕು.
ಪೊಲೀಸರು ನಿಮ್ಮ ವಾಹನವನ್ನು ಎತ್ತಿಕೊಂಡು ಹೋಗಬಹುದೇ?
ತಪ್ಪಾದ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದರೆ, ನಿಯಮಗಳ ಪ್ರಕಾರ ಪೊಲೀಸರು ವಾಹನವನ್ನು ಟೋಯಿಂಗ್ ಮೂಲಕ ತೆಗೆದುಕೊಂಡು ಹೋಗಬಹುದು. ಆದರೆ ವಾಹನದಲ್ಲಿ ಚಾಲಕ ಅಥವಾ ಪ್ರಯಾಣಿಕರು ಕುಳಿತಿರುವಾಗ ಅದನ್ನು ಟೋಯಿಂಗ್ ಮಾಡುವುದಕ್ಕೆ ನಿರ್ಬಂಧಗಳಿವೆ. ವಾಹನದಿಂದ ತೀವ್ರ ಸಂಚಾರ ಅಡಚಣೆ ಉಂಟಾಗುತ್ತಿದ್ದರೆ ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಬಹುದು.
ಪೊಲೀಸರು ವಶಕ್ಕೆ ಪಡೆದರೆ ನಿಮ್ಮ ಹಕ್ಕುಗಳೇನು?
ಪೊಲೀಸರು ನಿಮ್ಮನ್ನು ಬಂಧಿಸಿದರೆ, ಕಾನೂನಿನ ಪ್ರಕಾರ ಬಂಧನದ ಕಾರಣ ತಿಳಿಸಬೇಕು. ಬಂಧಿತ ವ್ಯಕ್ತಿಯನ್ನು ಸಾಮಾನ್ಯವಾಗಿ 24 ಗಂಟೆಗಳೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು. ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ ಅಥವಾ ಅಕ್ರಮ ವರ್ತನೆ ನಡೆದರೆ ಪೊಲೀಸ್ ಠಾಣೆಯಲ್ಲಿ ಅಥವಾ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು.
ವಾಹನ ಸವಾರರು ಈ ವಿಷಯಗಳನ್ನು ನೆನಪಿಡಿ
· ವಾಹನ ಚಾಲನೆ ಮಾಡುವಾಗ ಚಾಲನಾ ಪರವಾನಗಿ ಮತ್ತು ವಾಹನದ ಅಗತ್ಯ ದಾಖಲೆಗಳನ್ನು ಹೊಂದಿರಿ.
· ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ.
· ಸಂಚಾರ ನಿಯಮಗಳನ್ನು ಪಾಲಿಸಿ.
· ಪೊಲೀಸರು ಚಲನ್ ವಿಧಿಸಿದರೆ ಅದರ ಅಧಿಕೃತ ವಿವರಗಳನ್ನು ಪರಿಶೀಲಿಸಿ.
· ಯಾವುದೇ ಸಮಸ್ಯೆ ಎದುರಾದರೂ ಪೊಲೀಸರೊಂದಿಗೆ ವಾಗ್ವಾದ ಮಾಡದೆ ಕಾನೂನುಬದ್ಧವಾಗಿ ದೂರು ನೀಡಿ.
DISCLAIMER : ಟ್ರಾಫಿಕ್ ಪೊಲೀಸರು ವಾಹನ ನಿಲ್ಲಿಸುವುದು, ತಪಾಸಣೆ ನಡೆಸುವುದು, ದಂಡ ವಿಧಿಸುವುದು ಮತ್ತು ವಾಹನವನ್ನು ವಶಕ್ಕೆ ಪಡೆಯುವುದು ಸೇರಿದಂತೆ ವಿವಿಧ ಅಧಿಕಾರಗಳನ್ನು ಕಾನೂನು ನಿರ್ದಿಷ್ಟ ಸಂದರ್ಭಗಳಲ್ಲಿ ನೀಡಿದೆ. ಕೀಗಳನ್ನು ತೆಗೆದುಕೊಳ್ಳುವ ಅಧಿಕಾರದ ಕುರಿತು ಮೇಲಿನ ವರದಿಯಲ್ಲಿರುವ ಹೇಳಿಕೆಗಳನ್ನು ಎಲ್ಲ ಸಂದರ್ಭಗಳಿಗೂ ಅನ್ವಯಿಸುವ ಸಾಮಾನ್ಯ ಕಾನೂನು ನಿಯಮವೆಂದು ಪರಿಗಣಿಸಬಾರದು.

