HomeEntertainmentಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣಗೆ ಜನ್ಮದಿನದ ಸಂಭ್ರಮ: ರಂಗಭೂಮಿಯಿಂದ ಬೆಳ್ಳಿಪರದೆಯವರೆಗೆ ಅಪರೂಪದ ಪಯಣ

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣಗೆ ಜನ್ಮದಿನದ ಸಂಭ್ರಮ: ರಂಗಭೂಮಿಯಿಂದ ಬೆಳ್ಳಿಪರದೆಯವರೆಗೆ ಅಪರೂಪದ ಪಯಣ

ಚಂದನವನದ ಹಾಸ್ಯ ಹಾಗೂ ಪೋಷಕ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಹಿರಿಯ ನಟ ದೊಡ್ಡಣ್ಣ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1949ರ ನವೆಂಬರ್ 11ರಂದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಸುಗುರಪ್ಪ ಹಾಗೂ ನಂಜಮ್ಮ ದಂಪತಿಯ ಕೊನೆಯ ಮಗನಾಗಿ ಜನಿಸಿದ ದೊಡ್ಡಣ್ಣ, ಇಂದು ತಮ್ಮ 77ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅರಸೀಕೆರೆಯಲ್ಲಿ ತಮ್ಮ ಶಾಲಾ ಶಿಕ್ಷಣ ಪೂರೈಸಿದ ಇವರಿಗೆ ಅಜ್ಜನ ಹೆಸರು ಕಡ್ಲೆ ದೊಡ್ಡಪ್ಪ ನ ನೆನಪಿಗಾಗಿ ದೊಡ್ಡಣ್ಣ ಎಂದು ಹೆಸರಿಡಲಾಗಿತ್ತು.

ಚಿಕ್ಕಂದಿನಿಂದಲೇ ನಟನೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದ ದೊಡ್ಡಣ್ಣ ಅವರ ಕಲಾಪಯಣ ಆರಂಭವಾಗಿದ್ದು ರಂಗಭೂಮಿಯ ಮೂಲಕ. ‘ಸಿವಿಲ್ ಮ್ಯಾರೇಜ್’ ಎಂಬ ನಾಟಕದಲ್ಲಿ ಹೆಣ್ಣಿನ ಪಾತ್ರ ಮಾಡುವ ಮೂಲಕ ರಂಗಪ್ರವೇಶ ಮಾಡಿದ ಇವರು, ಬಳಿಕ ತಮ್ಮ ಸಹೋದರರೊಂದಿಗೆ ಸೇರಿ ಹಾಸನದಲ್ಲಿ ‘ವಿಘ್ನೇಶ್ವರ ಕಲಾ ಸಂಘ’ ಸಂಸ್ಥೆಯ ಮೂಲಕ ಅನೇಕ ಪ್ರಸಿದ್ಧ ನಾಟಕಗಳಲ್ಲಿ ಅಭಿನಯಿಸಿದರು.

ಬಳಿಕ 1968ರಲ್ಲಿ ಭದ್ರಾವತಿಯ ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ (ವಿಐಎಸ್‌ಎಲ್) ಸಂಸ್ಥೆಯಲ್ಲಿ ವೆಲ್ಡರ್ ಆಗಿ ಉದ್ಯೋಗಕ್ಕೆ ಸೇರಿದ ದೊಡ್ಡಣ್ಣ, ಕೆಲಸದ ಜೊತೆ ಜೊತೆಯಲ್ಲೇ ತಮ್ಮ ಅಭಿನಯದ ಹವ್ಯಾಸವನ್ನು ಕೈಬಿಡಲಿಲ್ಲ. ತಮ್ಮ ಸ್ನೇಹಿತರೊಂದಿಗೆ ಸೇರಿ ‘ಗಂಧರ್ವ ರಂಗ’ ಎಂಬ ನಾಟಕ ತಂಡವನ್ನು ಕಟ್ಟಿ, ಬಿ. ವಿ. ಕಾರಂತ್, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರ ಅವರ ನಿರ್ದೇಶನದ ನಾಟಕಗಳನ್ನು ವೀಕ್ಷಿಸುತ್ತಾ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1981ರಲ್ಲಿ ಖ್ಯಾತ ನಿರ್ದೇಶಕ ಎಸ್. ಸಿದ್ಧಲಿಂಗಯ್ಯ ಅವರ ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಚಿತ್ರದ ಮೂಲಕ ಕನ್ನಡಿಗರ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ ದೊಡ್ಡಣ್ಣ, 1988ರವರೆಗೆ ತಮ್ಮ ಕಾರ್ಖಾನೆಯ ಕೆಲಸವನ್ನೂ ಮುಂದುವರಿಸಿದ್ದರು. 80ರ ದಶಕದಿಂದ ಆರಂಭಿಸಿ ಇದುವರೆಗೆ 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು, ಕೇವಲ ಹಾಸ್ಯ ಪಾತ್ರಗಳಿಗಷ್ಟೇ ಸೀಮಿತವಾಗದೆ ಖಳನಾಯಕ, ಪೋಲಿಸ್ ಅಧಿಕಾರಿ, ರಾಜಕಾರಣಿ ಸೇರಿದಂತೆ ವಿವಿಧ ರೀತಿಯ ಪೋಷಕ ಪಾತ್ರಗಳಲ್ಲಿ ಜೀವಿಸಿದ್ದಾರೆ.

ಅಜೇಯ, ಸಾಂಗ್ಲಿಯಾನ, ಅಂಜದ ಗಂಡು, ಶಿವ ಮೆಚ್ಚಿದ ಕಣ್ಣಪ್ಪ, ಸಿಬಿಐ ಶಂಕರ್, ಬೆಳ್ಳಿ ಮೋಡಗಳು ಮುಂತಾದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಇವರ ನಟನೆ ಅಪಾರ ಪ್ರಶಂಸೆ ಗಳಿಸಿತು. ಕೇವಲ ಕನ್ನಡ ಮಾತ್ರವಲ್ಲದೆ ತಮಿಳಿನ ‘ಜೈ’ ಮತ್ತು ‘ಐಂದಾಮ್ ಪಡೈ’ ನಂತಹ ಚಿತ್ರಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. 1998-99ರ ಸಾಲಿನಲ್ಲಿ ತೆರೆಕಂಡ ‘ಟುವ್ವಿ ಟುವ್ವಿ ಟುವ್ವಿ’ ಚಿತ್ರದ ಅದ್ಭುತ ನಟನೆಗಾಗಿ ಇವರಿಗೆ ‘ಅತ್ಯುತ್ತಮ ಪೋಷಕ ನಟ’ ರಾಜ್ಯ ಪ್ರಶಸ್ತಿ ಲಭಿಸಿದೆ.

ಸಿನಿಮಾ ರಂಗದ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ ಇವರು, 2004ರಲ್ಲಿ ಜನತಾ ಪಾರ್ಟಿಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ನಂತರ ಭಾರತೀಯ ಜನತಾ ಪಾರ್ಟಿ ಹಾಗೂ ಕರ್ನಾಟಕ ಜನತಾ ಪಕ್ಷದಲ್ಲೂ ಸಕ್ರಿಯರಾಗಿದ್ದರು. 2016ರಲ್ಲಿ ನಡೆದ 6ನೇ ಅರಸೀಕೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಇವರಿಗೆ ದೊರೆತಿದೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಈ ಹಿರಿಯ ಕಲಾವಿದನಿಗೆ ಚಿತ್ರರಂಗದ ಗಣ್ಯರು ಹಾಗೂ ಕೋಟ್ಯಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೃತ್ಪೂರ್ವಕ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular