ಟೊಯೊಟಾ ಕಂಪನಿ ವಾಣಿಜ್ಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಹೊಸ ಇನೋವಾ ಕ್ರಿಸ್ಟಾ ಲಿಮೋ ಎಡಿಷನ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಮಾದರಿಯ ಆರಂಭಿಕ ಎಕ್ಸ್ಶೋರೂಂ ಬೆಲೆ ₹19.95 ಲಕ್ಷವಾಗಿದೆ. ಪ್ರಯಾಣಿಕರಿಗೆ ಆರಾಮದಾಯಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಆವೃತ್ತಿಯನ್ನು ವಿನ್ಯಾಸಗೊಳಿಸಲಾಗಿದೆ.
ಇನೋವಾ ಕ್ರಿಸ್ಟಾ ಲಿಮೋ ಎಡಿಷನ್ ಕಾರು GX-SLF ಗ್ರೇಡ್ ಆಧಾರಿತವಾಗಿದೆ. ಇದು ಸಾಮಾನ್ಯ GX ಮಾದರಿಯ ಫ್ಲೀಟ್ ಆವೃತ್ತಿಯಾಗಿದ್ದು, ವಿಶ್ವಾಸಾರ್ಹ ವಾಹನವನ್ನು ಬಯಸುವ ಟ್ಯಾಕ್ಸಿ ಮತ್ತು ಇತರ ವಾಣಿಜ್ಯ ಗ್ರಾಹಕರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಗ್ರಾಹಕರು 7 ಸೀಟರ್ ಮತ್ತು 8 ಸೀಟರ್ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು.
ಇನೋವಾ ಕ್ರಿಸ್ಟಾ ಸರಣಿಯ ಉತ್ಪಾದನೆ 2027ರ ಮಾರ್ಚ್ ವೇಳೆಗೆ ಸ್ಥಗಿತಗೊಳ್ಳುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಹೊಸ ಲಿಮೋ ಆವೃತ್ತಿ ಅನ್ನು ಪರಿಚಯಿಸಿದೆ.
ವಿನ್ಯಾಸದಲ್ಲಿ ಏನೆಲ್ಲಾ ವಿಶೇಷತೆಗಳಿವೆ?
ಹೊಸ ಲಿಮೋ ಆವೃತ್ತಿ ಕಾರಿನ ಹೊರ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಸಾಮಾನ್ಯ GX ಮಾದರಿಯ ವಿನ್ಯಾಸವನ್ನೇ ಮುಂದುವರಿಸಿದೆ. ಕಪ್ಪು ಬಣ್ಣದ ಮುಂಭಾಗದ ಗ್ರಿಲ್ಗೆ ಬೆಳ್ಳಿ ಬಣ್ಣದ ಅಡ್ಡ ಪಟ್ಟಿಗಳನ್ನು ನೀಡಲಾಗಿದೆ. ಹ್ಯಾಲೊಜೆನ್ ಹೆಡ್ಲ್ಯಾಂಪ್ಗಳು, ಮುಂಭಾಗದ ಬಂಪರ್ನ ಕೆಳಭಾಗದಲ್ಲಿರುವ ‘Crysta’ ಅಕ್ಷರಗಳು ಹಾಗೂ 16 ಇಂಚಿನ ಬೆಳ್ಳಿ ಬಣ್ಣದ ಅಲಾಯ್ ವೀಲ್ಗಳು ಇದರ ಪ್ರಮುಖ ವಿನ್ಯಾಸದ ಅಂಶಗಳಾಗಿವೆ.
ಒಳಾಂಗಣದ ವಿಚಾರಕ್ಕೆ ಬಂದರೆ, 7 ಸೀಟರ್ ಮಾದರಿಯಲ್ಲಿ ಮಧ್ಯದ ಸಾಲಿಗೆ ಕ್ಯಾಪ್ಟನ್ ಸೀಟ್ಗಳನ್ನು ನೀಡಲಾಗಿದೆ. 8 ಸೀಟರ್ ಆವೃತ್ತಿಯಲ್ಲಿ ಬೆಂಚ್ ಸೀಟ್ ವ್ಯವಸ್ಥೆ ಇರಲಿದೆ. ಫ್ಯಾಬ್ರಿಕ್ ಸೀಟ್ಗಳು, ಎತ್ತರ ಹೊಂದಿಸಬಹುದಾದ ಚಾಲಕನ ಸೀಟ್ ಮತ್ತು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ವ್ಯವಸ್ಥೆಯೂ ಲಭ್ಯವಿದೆ.
ಈ ಟಚ್ಸ್ಕ್ರೀನ್ನಲ್ಲಿ Apple CarPlay ಮತ್ತು Android Auto ಸಂಪರ್ಕ ಸೌಲಭ್ಯವಿದೆ. ಅಲ್ಲದೆ, ಮೂರು ಸಾಲುಗಳಲ್ಲಿರುವ ಪ್ರಯಾಣಿಕರಿಗೂ ಮ್ಯಾನ್ಯುವಲ್ ಎಸಿ ವೆಂಟ್ಗಳನ್ನು ಒದಗಿಸಲಾಗಿದೆ. ಎರಡು 12V ಪವರ್ ಸಾಕೆಟ್ಗಳನ್ನೂ ನೀಡಲಾಗಿದೆ.
ಸುರಕ್ಷತೆಗೆ ಯಾವ ಸೌಲಭ್ಯಗಳಿವೆ?
ಪ್ರಯಾಣಿಕರ ಸುರಕ್ಷತೆಗಾಗಿ ಟೊಯೊಟಾ ಹಲವು ವೈಶಿಷ್ಟ್ಯಗಳನ್ನು ಒದಗಿಸಿದೆ. ಮಲ್ಟಿಪಲ್ ಏರ್ಬ್ಯಾಗ್ಗಳು, ABS ಜೊತೆಗೆ EBD, ಬ್ರೇಕ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಸೌಲಭ್ಯಗಳು ಕಾರಿನಲ್ಲಿವೆ.
ಎಂಜಿನ್, ಮೈಲೇಜ್ ಮತ್ತು ವಾರಂಟಿ ಮಾಹಿತಿ
ಇನೋವಾ ಸಿರಿಸ್ತಾ ಲಿಮೋ ಎಡಿಷನ್ ಕಾರಿನ ಎಂಜಿನ್ ಮತ್ತು ಗೇರ್ಬಾಕ್ಸ್ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಿಂದಿನ ಮಾದರಿಯಲ್ಲಿರುವ 2.4 ಲೀಟರ್ ಟರ್ಬೊ ಡೀಸೆಲ್ ಎಂಜಿನ್ನ್ನೇ ಮುಂದುವರಿಸಲಾಗಿದೆ. ಈ ಎಂಜಿನ್ 150 bhp ಪವರ್ ಮತ್ತು 343 Nm ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ನೀಡಲಾಗಿದೆ.
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಈ ಕಾರು ಪ್ರತಿ ಲೀಟರ್ ಡೀಸೆಲ್ಗೆ ಗರಿಷ್ಠ 15 ಕಿ.ಮೀ. ಮೈಲೇಜ್ ನೀಡುತ್ತದೆ. ಖರೀದಿದಾರರಿಗೆ 3 ವರ್ಷ ಅಥವಾ 1 ಲಕ್ಷ ಕಿ.ಮೀ. ಸ್ಟ್ಯಾಂಡರ್ಡ್ ವಾರಂಟಿ ಸಿಗಲಿದೆ. ಅಗತ್ಯವಿದ್ದರೆ ಇದನ್ನು 5 ವರ್ಷ ಅಥವಾ 2.20 ಲಕ್ಷ ಕಿ.ಮೀ.ವರೆಗೆ ವಿಸ್ತರಿಸಿಕೊಳ್ಳಬಹುದು.
ಟೊಯೊಟಾ ಗ್ಲಾಂಜಾ ಫೇಸ್ಲಿಫ್ಟ್ ಕೂಡ ಬಿಡುಗಡೆ
ಟೊಯೊಟಾ ಇತ್ತೀಚೆಗೆ ಗ್ಲಾಂಜಾ ಕಾರಿನ ನವೀಕರಿಸಿದ ಆವೃತ್ತಿಯನ್ನೂ ಬಿಡುಗಡೆ ಮಾಡಿತ್ತು. ಇದರ ಆರಂಭಿಕ ಎಕ್ಸ್ಶೋರೂಂ ಬೆಲೆ ₹6.99 ಲಕ್ಷವಾಗಿದ್ದು, ಟಾಪ್ ಎಂಡ್ ಮಾದರಿಯ ಬೆಲೆ ₹10.49 ಲಕ್ಷವಾಗಿದೆ.
ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಗ್ಲಾಂಜಾ ಬೆಲೆಯಲ್ಲಿ ₹26,000 ಹೆಚ್ಚಳವಾಗಿದೆ. ಹೊಸ ಎಂಜಿನ್, ವೆಂಟಿಲೇಟೆಡ್ ಸೀಟ್ಗಳು ಸೇರಿದಂತೆ ಹಲವು ಬದಲಾವಣೆಗಳನ್ನು ಈ ಆವೃತ್ತಿಯಲ್ಲಿ ಪರಿಚಯಿಸಲಾಗಿದೆ.

