ರಾಜ್ಯದಲ್ಲಿ ಅಗತ್ಯ ಆಹಾರ ಧಾನ್ಯಗಳ ಬೆಲೆ ಏರಿಕೆ ಮುಂದುವರಿದಿದ್ದು, ಇದೀಗ ಗೋಧಿಯ ದರವೂ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲೇ ಗೋಧಿ ಬೆಲೆಯಲ್ಲಿ ಸುಮಾರು ಶೇ.20ರಷ್ಟು ಏರಿಕೆಯಾಗಿದೆ. ಕಲಬುರಗಿ ಮಾರುಕಟ್ಟೆಯಲ್ಲಿ ಸಗಟು ದರ ಪ್ರತಿ ಕ್ವಿಂಟಾಲ್ಗೆ ₹4,800ರಿಂದ ₹5,200ರವರೆಗೆ ತಲುಪಿದೆ. ಇದರಿಂದ ಈಗಾಗಲೇ ದಿನಸಿ ಖರ್ಚಿನಿಂದ ಕಂಗಾಲಾಗಿರುವ ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳುವ ಆತಂಕ ಎದುರಾಗಿದೆ.
ಈ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಗೋಧಿ ಪ್ರತಿ ಕ್ವಿಂಟಾಲ್ಗೆ ₹3,500ರಿಂದ ₹4,000ರ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಆದರೆ, ಕಳೆದ ಕೆಲ ದಿನಗಳಿಂದ ದರದಲ್ಲಿ ಏರಿಕೆ ಕಂಡುಬಂದಿದೆ. ಕೆಲವು ಪ್ರತಿಷ್ಠಿತ ಬ್ರ್ಯಾಂಡ್ಗಳ ಗೋಧಿ ದರದಲ್ಲಿಯೂ ಪ್ರತಿ ಕ್ವಿಂಟಾಲ್ಗೆ ₹1,000ರಿಂದ ₹1,500ರವರೆಗೆ ಹೆಚ್ಚಳವಾಗಿದೆ ಎನ್ನಲಾಗಿದೆ. ಇತರ ಗೋಧಿ ತಳಿಗಳ ಬೆಲೆ ಕೂಡ ₹400ರಿಂದ ₹600ರವರೆಗೆ ಏರಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಗೋಧಿ ಬೆಲೆ ಏರಿಕೆಗೆ ಕಾರಣವೇನು?
ಕರ್ನಾಟಕಕ್ಕೆ ಅಗತ್ಯವಿರುವ ಒಟ್ಟು ಗೋಧಿಯ ಪೈಕಿ ಕೇವಲ ಶೇ.20ರಷ್ಟು ಮಾತ್ರ ರಾಜ್ಯದಲ್ಲೇ ಉತ್ಪಾದನೆಯಾಗುತ್ತದೆ. ಉಳಿದ ಪ್ರಮಾಣಕ್ಕಾಗಿ ಮಧ್ಯಪ್ರದೇಶ ಸೇರಿದಂತೆ ಬೇರೆ ರಾಜ್ಯಗಳನ್ನು ಅವಲಂಬಿಸಬೇಕಾಗಿದೆ.
ಗೋಧಿ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಮಧ್ಯಪ್ರದೇಶದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆಯಿಂದ ಬೆಳೆ ಉತ್ಪಾದನೆ ಕುಸಿದಿದೆ ಎನ್ನಲಾಗಿದೆ. ಇದರಿಂದ ಮಾರುಕಟ್ಟೆಗೆ ಬರುತ್ತಿರುವ ಗೋಧಿಯ ಪ್ರಮಾಣ ಕಡಿಮೆಯಾಗಿ, ದರ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುತ್ತಾ?
ಮಾರುಕಟ್ಟೆಯಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಗೋಧಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಪಿಎಂಸಿ ವರ್ತಕರು ಅಂದಾಜಿಸಿದ್ದಾರೆ. ಪ್ರಸ್ತುತ ₹5,000ರ ಆಸುಪಾಸಿನಲ್ಲಿರುವ ಕೆಲವು ಬ್ರ್ಯಾಂಡೆಡ್ ಗೋಧಿಯ ದರ ಮುಂದಿನ ದಿನಗಳಲ್ಲಿ ₹6,000ರ ಗಡಿ ದಾಟಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.
ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆ
ಈಗಾಗಲೇ ಹಾಲು, ಮೊಸರು, ಬಸ್ ಪ್ರಯಾಣ ದರ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಅಕ್ಕಿ, ತೊಗರಿ ಬೇಳೆ ಮತ್ತು ಸಕ್ಕರೆ ದರಗಳೂ ಏರಿಕೆಯಾಗಿವೆ. ಇದೀಗ ಗೋಧಿಯ ಬೆಲೆಯೂ ಹೆಚ್ಚಾಗಿರುವುದರಿಂದ ಚಪಾತಿ, ಹೋಳಿಗೆ ಸೇರಿದಂತೆ ಗೋಧಿಯಿಂದ ತಯಾರಿಸುವ ಆಹಾರ ಪದಾರ್ಥಗಳ ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ.
ಹಬ್ಬದ ಸಿದ್ಧತೆಯಲ್ಲಿರುವ ಜನರಿಗೆ ಈ ಬೆಲೆ ಏರಿಕೆ ಮತ್ತಷ್ಟು ಹೊರೆಯಾಗಬಹುದು. ಗೋಧಿ ಪೂರೈಕೆ ಮತ್ತು ಮಾರುಕಟ್ಟೆಯ ಬೇಡಿಕೆಯಲ್ಲಿ ಸುಧಾರಣೆ ಕಾಣದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಬಹುದು.

