ಚೆನ್ನೈ: ದೀಪಾವಳಿ ಹಬ್ಬದ ಸಂಭ್ರಮದ ಆಚರಣೆ ಹಿನ್ನೆಲೆಯಲ್ಲಿ ಸಿಡಿಸಿದ ಪಟಾಕಿಯಿಂದಾಗಿ ದಟ್ಟ ಹೊಗೆಯುಂಟಾಗಿ ರನ್ವೇಯಲ್ಲಿ ವೀಕ್ಷಣಾ ಸಾಮರ್ಥ್ಯ ಕುಸಿದು, ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
ಚೆನ್ನೈ ಏರ್ ಪೋರ್ಟ್ ನಲ್ಲಿ ಒಟ್ಟು 26 ವಿಮಾನಗಳ ಹಾರಾಟ ವಿಳಂಬಗೊಂಡಿದ್ದು, ರಾಯಪುರದಿಂದ ಆಗಮಿಸುತ್ತಿದ್ದ ಇಂಡಿಗೋ ವಿಮಾನವನ್ನು ಬೆಂಗಳೂರಿಗೆ ಮಾರ್ಗ ಬದಲಾಯಿಸಲಾಗಿದೆ.
ಭಾನುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಪಟಾಕಿ ಸಿಡಿಸುವ ಚಟುವಟಿಕೆಗೆ ಅಡ್ಡಿಯಾದರೂ, ಸಂಜೆ ಚೆನ್ನೈ ಮತ್ತು ಉಪನಗರಗಳಲ್ಲಿ ಸಂಭ್ರಮಾಚರಣೆಗಳು ಹೆಚ್ಚಿದ್ದವು. ರಾತ್ರಿ 10 ಗಂಟೆಯ ನಂತರವೂ ಹಲವು ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದು ಮುಂದುವರಿದಿತು.
ಮೀನಂಬಾಕ್ಕಂನಲ್ಲಿರುವ ಚೆನ್ನೈ ವಿಮಾನ ನಿಲ್ದಾಣದ ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆ. ನಿರಂತರವಾಗಿ ಪಟಾಕಿ ಸಿಡಿಸಿದ್ದರಿಂದ ರನ್ವೇ ಬಳಿ ಹೊಗೆ ತುಂಬಿಕೊಂಡಿತು. ಇದರಿಂದ ಗೋಚರತೆ ಕಡಿಮೆಯಾಗಿ ವಿಮಾನಗಳ ಇಳಿಯುವಿಕೆ ಮತ್ತು ಹಾರಾಟಕ್ಕೆ ಅಡಚಣೆ ಉಂಟಾಯಿತು.
ದೀಪಾವಳಿ ಸಂದರ್ಭದಲ್ಲಿ ವೀಕ್ಷಣಾ ಸಾಮರ್ಥ್ಯ ಕಡಿಮೆಯಾಗುವ ಬಗ್ಗೆ ನಿರೀಕ್ಷಿಸಲಾಗಿತ್ತು. ಈ ಸಂಬಂಧ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು. ರನ್ವೇಯಲ್ಲಿನ ಗೋಚರತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಗೋಚರತೆಯ ಪರಿಸ್ಥಿತಿಗಳು ಸುರಕ್ಷಿತವೆಂದು ಪರಿಗಣಿಸಲ್ಪಟ್ಟಾಗ ಮಾತ್ರ ವಿಮಾನ ಕಾರ್ಯಾಚರಣೆಗಳಿಗೆ ಅನುಮತಿ ನೀಡಲಾಗುತ್ತಿತ್ತು.
ವಿಮಾನಗಳ ಹಾರಾಟ, ಲ್ಯಾಂಡಿಂಗ್ ತಡ:
ಭಾನುವಾರ ಸಂಜೆ 7 ಗಂಟೆಯ ನಂತರ ಗೋಚರತೆ ಕಡಿಮೆಯಾದ್ದರಿಂದ, ಆಗಮಿಸುತ್ತಿದ್ದ ವಿಮಾನಗಳಿಗೆ ತಕ್ಷಣವೇ ಇಳಿಯಲು ಸಾಧ್ಯವಾಗಲಿಲ್ಲ. ಪರಿಸ್ಥಿತಿ ಸುಧಾರಿಸುವವರೆಗೆ ಅವು ಆಗಸದಲ್ಲೇ ಸುತ್ತಾಟ ನಡೆಸಿದವು. ಒಟ್ಟು 11 ವಿಮಾನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಾತ್ರಿ 10 ಗಂಟೆಯ ಮೇಲೆ ಗೋಚರತೆ ಸುಧಾರಣೆ ಕಂಡಿದ್ದು 10 ವಿಮಾನ ಲ್ಯಾಂಡ್ ಆಗಿದ್ದು, ಒಂದು ವಿಮಾನ ಬೆಂಗಳೂರಿಗೆ ಮಾರ್ಗ ಬದಲಾಯಿತು.
ಅದೇ ರೀತಿ, ಚೆನ್ನೈನಿಂದ ಹಾಂಗ್ ಕಾಂಗ್, ಅಬು ಧಾಬಿ, ಸಿಂಗಾಪೂರ್, ಕೌಲಲಂಪುರ್, ದುಬೈ, ಶ್ರೀಲಂಕಾ, ದೆಹಲಿ ಮತ್ತು ಪುಣೆ ಸೇರಿದಂತೆ 15 ಸ್ಥಳಗಳಿಗೆ ತೆರಳಬೇಕಿದ್ದ ವಿಮಾನಗಳು ತಡವಾಗಿ ಹಾರಾಟ ನಡೆಸಿದವು.
ಮೂಲಗಳ ಪ್ರಕಾರ, ಕಳೆದ ವರ್ಷವೂ ಕೂಡ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಪಟಾಕಿಗಳಿಂದ ಉಂಟಾದ ಹೊಗೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

