HomeKarnatakaಡಿಸಿ ಲತಾಕುಮಾರಿ ಹಾಗೂ ಸಚಿವ ಶಿವಲಿಂಗೇಗೌಡ ವಿರುದ್ಧದ ಲಂಚದ ಆರೋಪಕ್ಕೆ ಹೊಸ ತಿರುವು: ದೂರು ದಾಖಲಿಸಿದ...

ಡಿಸಿ ಲತಾಕುಮಾರಿ ಹಾಗೂ ಸಚಿವ ಶಿವಲಿಂಗೇಗೌಡ ವಿರುದ್ಧದ ಲಂಚದ ಆರೋಪಕ್ಕೆ ಹೊಸ ತಿರುವು: ದೂರು ದಾಖಲಿಸಿದ ಪಿಎ

ಹಾಸನ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಲಂಚದ ಆರೋಪ ಮಾಡಿ ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ್ದರು. ಈ ಲಂಚದ ಆರೋಪ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಪ್ರಕರಣ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿ ಲತಾಕುಮಾರಿ ಪಿಎ ಶಶಿಕಿರಣ್ ದೂರು ನೀಡಿದ್ದಾರೆ. ತಮ್ಮ ಮೊಬೈಲ್ ನಂಬರ್ ಬಳಸಿ ನಕಲಿ ವಾಟ್ಸಾಪ್ ಸಂದೇಶ ಸೃಷ್ಟಿಸಿ ಹರಡಲಾಗುತ್ತಿದೆ. ಇದರಿಂದ ವೈಯಕ್ತಿಕ ವರ್ಚಸ್ಸು, ಆಡಳಿತಾತ್ಮಕವಾಗಿ ಧಕ್ಕೆ ಆಗುತ್ತಿದೆ. ಆ ಸಂದೇಶದಲ್ಲಿ ಡಿಸಿ, ಸಚಿವರು, ಅರಸೀಕೆರೆ ತಹಶೀಲ್ದಾರ್ ಸೇರಿದಂತೆ ಡಿಸಿ, ಎಸಿ , ಎಡಿಸಿ ಕಚೇರಿ ಸಿಬ್ಬಂದಿ ಹೆಸರು ಉಲ್ಲೇಖಿಸಲಾಗಿದೆ ಎಂದು ದೂರಿದ್ದಾರೆ. ಶಶಿಕಿರಣ್ ದೂರು ಆಧರಿಸಿ BNS ಕಾಯ್ದೆ 336,(4), 335 ಅಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನಡುವೆ ಭ್ರಷ್ಟಾಚಾರ ಆರೋಪ ಸಂಬಂಧ ಕುಮಾರಸ್ವಾಮಿ ಅವರಿಂದ ಕೆಲ ದಾಖಲೆ ಬಿಡುಗಡೆ ಬೆನ್ನಲ್ಲೇ ಕೇಂದ್ರ ಸಚಿವರಿಗೇ ಹಾಸನ ಡಿಸಿ ಕೆ.ಎಸ್.ಲತಾಕುಮಾರಿ ಕೌಂಟರ್​​ ಕೊಟ್ಟರಾ ಎಂಬ ಪ್ರಶ್ನೆ ಮೂಡಿದೆ. ಕಾರಣ ಸಿಂಹ ಮಲಗಿರುವಾಗ ನಾಯಿಗಳು ಬೊಗಳುವ ಇಮೇಜ್ ಹಾಕಿ ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ ಎಂದು ತಮ್ಮ ವಾಟ್ಸಾಪ್​​, ಟ್ವಿಟರ್​​​ನಲ್ಲಿ ಪೋಸ್ಟ್​​ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

ನವೆಂಬರ್ 8ರಂದು ಸುದ್ದಿಗೋಷ್ಠಿ ನಡೆಸಿದ್ದ ಹೆಚ್.ಡಿ.ಕುಮಾರಸ್ವಾಮಿ, ಹಾಸನ ಡಿಸಿ ಪಿಎ ಶಶಿಕಿರಣ್​​ರದ್ದು ಎನ್ನಲಾದ ವಾಟ್ಸ್ಯಾಪ್​​ ಚಾಟ್​​ನ 15 ಪುಟಗಳ ಸ್ಕ್ರೀನ್ ಶಾಟ್ ಪ್ರತಿಯನ್ನು ಬಿಡುಗಡೆ ಮಾಡಿದ್ದರು. ಇವನ್ನು ತನೆಗೆ ಯಾವುದೋ ಅಧಿಕಾರಿ ತಂದುಕೊಟ್ಟು ಹೋಗಿರುವುದಾಗಿಯೂ ತಿಳಿಸಿದ್ದರು. ಮೂರು ಕ್ರಷರ್ ಅನುಮತಿಗಾಗಿ 60 ಲಕ್ಷ ರೂ. ಲಂಚ ಕೇಳಿದ್ದ ಆರೋಪ ಮಾತ್ರವಲ್ಲದೆ ಡಿಸಿ ಲತಾಕುಮಾರಿ ಹಾಸನದಲ್ಲೇ ಉಳಿಯಲು ಸಚಿವ ಶಿವಲಿಂಗೇಗೌಡರಿಗೆ 75 ಲಕ್ಷ ರೂಪಾಯಿ ಲಂಚ ನೀಡಿರುವ ಸಂಬಂಧ ಮಾತುಕತೆ ಕೂಡ ಈ ಚಾಟ್​​ಗಳಲ್ಲಿ ಕಂಡುಬಂದಿತ್ತು. ಈ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಗಿದೆ. ಈ ನಡುವೆ ಪಿಎ ಶಶಿಕಿರಣ್ ಇದು ನಕಲಿ ವಾಟ್ಸಾಪ್ ಚಾಟ್ ಎಂದು ದೂರು ನೀಡಿದ್ದಾರೆ.

ಲಂಚದ ಆರೋಪ: ವಾಟ್ಸಾಪ್ ಚಾಟ್ ಬಹಿರಂಗಪಡಿಸಿದ ಹೆಚ್.ಡಿ.ಕೆ

ಹಾಸನ: ಹಾಸನ ಜಿಲ್ಲಾಧಿಕಾರಿ ಹಾಗೂ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಲಂಚದ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಹಾಸನ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಾಪ್ ಚಾಟ್ ಪ್ರಿಂಟ್​​ನ ಕುಮಾರಸ್ವಾಮಿ ಓದಿ ಹೇಳಿದ್ದು, ಇದು ಒಂದು ಜಿಲ್ಲೆ ಅಲ್ಲ. ಎಲ್ಲಾ ಕಡೆ ಇದೇ ವಾತಾವರಣ ಇದೆ. ಸಿಎಂ 10 ರೂ. ಲಂಚ ಕೇಳಿದರೂ ಫೋನ್‌ ಕರೆ ಮಾಡಿ ಅಂತಾರೆ. ಆದ್ರೆ ಇಲ್ಲಿನ ಸಚಿವರು ಗೌರವಯುತವಾಗಿ ಕೊಡಿ ಎಂದಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಸಿ ಅವರ ಪಿಎ ಶಶಿಕಿರಣ್​​ ಅವರ ವಾಟ್ಯಾಪ್​​ ಚಾಟ್​​ ಪ್ರಕಾರ, ಮೂರು ಕ್ರಷರ್​​ ಫೈಲ್​​ ಬಗ್ಗೆ ಚರ್ಚೆ ನಡೆದಿದೆ. ಕಳೆದ ಮೂರು ವರ್ಷದಿಂದ ನಿಮ್‌ ಹತ್ತಿರ ಎಷ್ಟು ಕೆಲಸ ಮಾಡಿಸಿದ್ದೇನೆ. ಕೇಳಿದ ಹಾಗೆ ಹಣ ಕೊಟ್ಟಿದ್ದೀನಿ, ಈಗ ಇಷ್ಟೊಂದು ಹಣ ಕೇಳ್ತಿದ್ದೀರಿ ಎಂದು ಇನ್ನೊಂದು ಕಡೆಯಿಂದ ಮೆಸೇಜ್​​ ಬಂದಿದೆ. ಅದಕ್ಕೆ ಈ ಕಡೆಯಿಂದ, ನೀವು ಕೊಡವಷ್ಟು ದುಡ್ಢನ್ನು ನಾವು ಡಿಸಿಯವರಿಗೆ ಕೊಡಬೇಕು. ಮಿಕ್ಕಿದ ಸಣ್ಣ ಹಣದಲ್ಲಿ ನಾನು ನನ್ನ ಸೆಕ್ಷನ್​ಗೆ ಹಂಚಬೇಕು. ಎಲ್ಲರಿಗೂ ಕೊಟ್ಟು ಮಿಕ್ಕೋದು ಮೂರು ನಾಮ ಮಾತ್ರ ಎಂದಿದ್ದಾರೆ. ಏಪ್ರಿಲ್​​ ಅಲ್ಲಿ ಒಂದು ಕೆಲಸಕ್ಕೆ ಹಠ ಹಿಡಿದು 15 ಲಕ್ಷ ಇಸ್ಕೊಂಡ್ರು. ಕೇಳಿದ್ರೆ ಡಿಸಿ ಮೇಡಂ ಒಂದು ರೂಪಾಯಿ ಕಡಿಮೆ ಆದರೂ ಆಗಲ್ಲ ಅಂತಾರೆ. ಇನ್ನೇನು ಡಿಸಿ ಮೇಡಂ ತಾನು ಇಸ್ಕೋತೀನಿ ಎಂದು ಪ್ರೆಸ್​​ಮೀಟ್​​ ಮಾಡಿ ಹೇಳ್ತಾರಾ? ಹಿಂದೆ ಇದ್ದ ಸತ್ಯಭಾಮ ಅವರೇ ಪರವಾಗಿಲ್ಲ. ಸ್ವಲ್ಪ ಮಾತ್ರ ಕೆಲಸ ಹೇಳೋರು. ದುಡ್ಡು ಅಷ್ಟೇ ಕಡಿಮೆ. ಈ ಡಿಸಿ ಬಂದಮೇಲೆ ನಮಗೂ ಖರ್ಚು ಮಾಡಿ ಸಾಕಾಗಿದೆ ಎಂದು ಹೇಳಿದ್ದು ಕೂಡ ಚಾಟ್​​ಗಳಲ್ಲಿವೆ.

ಆಗ ಇನ್ನೊಂದು ಕಡೆಯವರು, ಅವೆಲ್ಲ ಬಿಡಿ ಸರ್​​. ಆ ಮೂರು ಫೈಲ್​ದು ಒಂದು ಫೈನಲ್​​ ಅಮೌಂಟ್​​ ಹೇಳಿ ಎಂದಿದ್ದಾರೆ. ಅದಕ್ಕೆ ಹೇಳಿದ್ನಲ್ಲ ಹೋದ ವಾರವೇ, ಒಟ್ಟು 60 ಲಕ್ಷ ಕೊಡೋದಿದ್ದರೆ ಮಾತಾಡಿ. ಇಲ್ಲಂದ್ರೆ ಹಿಂಸೆಕೊಡಬೇಡಿ ಎಂದು ಇವರು ಹೇಳಿದ್ದಾರೆ. ಸಚಿವರು, ಸಂದರ ಬಳಿ ಬೇಕಿದ್ರೆ ಹೇಳಿಸುತ್ತೀನಿ ಎಂದಿದ್ದಕ್ಕೆ, ಶಿವಲಿಂಗೇಗೌಡರು ಡಿಸಿ ಬದಲಾವಣೆ ಮಾಡಿಸ್ತೀನಿ ಅಂತಿದ್ದರು. ಕೊನೆಗೆ ಡಿಸಿ ಮೇಡಂ ಅರಸೀಕೆರೆ ತಹಶೀಲ್ದಾರ್​​ ಸಂತೋಷ್​​ ಕಡೆ ಮಾತಾಡಿಸಿ 75 ಲಕ್ಷ ಕೊಟ್ಟು ಸುಮ್ಮನಿರಿಸಿದ್ದು. ಆ ಹಣವನ್ನು ನಾನು ಎಲ್ಲೆಲ್ಲೋ ಹೊಂದಿಸಿ ಕೊಟ್ಟುಬಂದೆ ಎಂದು ಹೇಳಿರುವುದು ಇದರಲ್ಲಿವೆ ಎಂದು ಕುಮಾರಸ್ವಾಮಿ ವಾಟ್ಸಾಪ್ ಚಾಟ್ ಓದಿ ಹೇಳಿದ್ದಾರೆ.

ಈ ಎಲ್ಲ ದಾಖಲೆಗಳನ್ನು ತನಗೆ ಯಾರೋ ಒಬ್ಬರು ಕೊಟ್ಟು ಹೋಗಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ರೀತಿ ಪ್ರತಿ ಜಿಲ್ಲೆಗಳಲ್ಲಿಯೂ ನಡೆಯುತ್ತಿದೆ. ಈ ಚಾಟ್​​ಗಳ ಬಗ್ಗೆ ಡಿಜಿ ಮತ್ತು ಐಜಿಪಿ ಡಾ.ಎಂ.ಎ.ಸಲೀಂ ಅವರು ತನಿಖೆ ಮಾಡಿಸ್ತಾರಾ? ಯಾರು ಈ ಮಧ್ಯವರ್ತಿಗಳು? ಯಾರ್ಯಾರಿಗೆ ದುಡ್ಡು ಹೋಗ್ತಿದೆ? ಹಾಸನಕ್ಕೆ ಬಂದ ಸಿಎಂ ಈ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಈ ಬಗ್ಗೆ ಕಡಿವಾಣ ಹಾಕ್ತಾರೋ ಇಲ್ಲವೋ ಎಂದು ಕೇಳಬೇಕಿದೆ. ಇಂತಹ ವಿಚಾರವನ್ನು ಮಾತನಾಡಿ ಮಾತನಾಡಿ ಬೇಸರ ಆಗಿದೆ. ಯಾರೂ ಅನ್ಯತಾ ಭಾವಿಸಬೇಡಿ. ಸರ್ಕಾರದಲ್ಲಿ ಏನು ನಡೆಯುತ್ತಿದೆ ಅದನ್ನು ಜನರ ಮುಂದೆ ಇಟ್ಟಿದ್ದೇನೆ ಎಂದವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular