ಮುಂಬೈ: ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ನಾಯಕ ಶರದ್ ಪವಾರ್ ಇದೀಗ ಅನಾರೋಗ್ಯದಿಂದ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಎದೆ ಸೋಂಕು ಹಾಗೂ ಬ್ರಾಂಕೈಟಿಸ್‌ನಂತಹ ಉಸಿರಾಟದ ಸಮಸ್ಯೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶನಿವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ತಮ್ಮನ್ನು ನೋಡಲು ಕಾದಿದ್ದ ಅಭಿಮಾನಿಗಳು ಹಾಗೂ ಬೆಂಬಲಿಗರತ್ತ ನಗುತ್ತಾ ಕೈಬೀಸಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಅಭಿಮಾನಿಗಳತ್ತ ನಗು ಚೆಲ್ಲಿದ ನಾಯಕ!
ಶರದ್ ಪವಾರ್ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಅವರ ವಾಹನದ ಸುತ್ತ ಅಭಿಮಾನಿಗಳು ಹಾಗೂ ಬೆಂಬಲಿಗರು ನೆರೆದಿದ್ದರು. ಈ ವೇಳೆ ಅವರು ಮಂದಹಾಸ ಬೀರುತ್ತಾ ಎಲ್ಲರತ್ತ ಕೈಬೀಸಿ ಶುಭಾಶಯ ಸ್ವೀಕರಿಸಿದರು. ಬಳಿಕ ಮುಂಬೈನಲ್ಲಿರುವ ತಮ್ಮ ನಿವಾಸ ‘ಸಿಲ್ವರ್ ಓಕ್’ಗೆ ತೆರಳಿದರು.
ಅವರ ಮುಖದಲ್ಲಿದ್ದ ನಗು ಹಾಗೂ ಅಭಿಮಾನಿಗಳಿಗೆ ನೀಡಿದ ಆತ್ಮೀಯ ಪ್ರತಿಕ್ರಿಯೆ ಬೆಂಬಲಿಗರಲ್ಲಿ ನೆಮ್ಮದಿ ಮೂಡಿಸಿದೆ.
ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ ಶರದ್ ಪವಾರ್
ಶರದ್ ಪವಾರ್ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಡಾ. ಪ್ರೀತಮ್ ಸಮ್ದಾನಿ, ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬ್ರಾಂಕೈಟಿಸ್‌ನಂತಹ ಸಮಸ್ಯೆ ಹಾಗೂ ಎದೆ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದೀಗ ಸೋಂಕಿನ ಲಕ್ಷಣಗಳು ಕಡಿಮೆಯಾಗಿದ್ದು, ಸ್ಥಿರ ಆರೋಗ್ಯ ಸ್ಥಿತಿಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮನೆಯಲ್ಲಿಯೇ ಔಷಧೋಪಚಾರ ಮುಂದುವರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವಯಸ್ಸಿನ ಹಿನ್ನೆಲೆಯಲ್ಲಿ ಕೆಲವು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆಯೂ ಸೂಚಿಸಿದ್ದಾರೆ.
ನಿರಂತರ ಕೆಮ್ಮು, ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು
ನಿರಂತರ ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಹೆಚ್ಚಿನ ವೈದ್ಯಕೀಯ ಆರೈಕೆಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಕೆಲವು ದಿನಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಇದೀಗ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಮರಳಿರುವ 85 ವರ್ಷದ ಹಿರಿಯ ನಾಯಕ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದು ಚಿಕಿತ್ಸೆ ಮುಂದುವರಿಸಲಿದ್ದಾರೆ.

