ಲಕ್ನೋ: ಮಕ್ಕಳಿದ್ದ ಮನೆಗಳಲ್ಲಿ ದೊಡ್ಡವರು ಎಷ್ಟೇ ಜಾಗೃತರಾಗಿ ಇದ್ದರೂ ಕಡಿಮೆಯೇ. ಮಕ್ಕಳ ಮೇಲೆ ಸ್ವಲ್ಪ ಗಮನ ಕಡಿಮೆಯಾದರೂ ಎಂತಹ ಅನಾಹುತಗಳನ್ನೇ ಮಾಡಿಕೊಂಡು ಬಿಡುತ್ತಾರೆ. ಇಂತದ್ದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲೇ ದುರಂತವಿಒಂದು ಸಂಭವಿಸಿದೆ. ಕೆಮ್ಮಿನ ಸಿರಪ್ ಕುಡಿದು ನಾಲ್ಕು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಡೀ ಬಾಟಲಿ ಕೆಮ್ಮಿನ ಸಿರಪ್ ಸೇವಿಸಿದ 4 ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮನೆಯಲ್ಲಿ ಪೋಷಕರ ಕಣ್ಣು ತಪ್ಪಿಸಿ ಮಗು ಕೆಮ್ಮಿನ ಸಿರಪ್ ಕುಡಿದಿದ್ದು, ದುರಂತಕ್ಕೆ ಕಾರಣವಾಗಿದೆ.
ಮನೆಯಲ್ಲಿಟ್ಟಿದ್ದ ಕೆಮ್ಮಿನ ಸಿರಪ್ ಬಾಟಲಿ ಜೊತೆ ಆಟವಾಡುತ್ತಿದ್ದ ಮಗು ಪೋಷಕರು ಬೇರೆ ಕೆಲಸದಲ್ಲಿದ್ದಾಗ ಆ ಬಾಟಲಿಯಲ್ಲಿದ್ದ ಪೂರ್ತಿ ಸಿರಪ್ ಅನ್ನು ಕುಡಿದಿದೆ. ಸ್ವಲ್ಪ ಸಮಯದ ನಂತರ ಮಗು ತೂಕಡಿಕೆ ಮತ್ತು ಅಸ್ವಸ್ಥತೆಗೆ ಒಳಗಾದಾಗ ಪೋಷಕರು ಗಾಬರಿಯಾಗಿದ್ದಾರೆ. ಮಗುವಿನ ಸ್ಥಿತಿ ಹದಗೆಡುತ್ತಿದ್ದಂತೆ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಗ ವೈದ್ಯರು ಸಿರಪ್ನಲ್ಲಿರುವ ರಾಸಾಯನಿಕಗಳ ಅತಿಯಾದ ಪ್ರಮಾಣವನ್ನು ಹೊರತೆಗೆಯಲು ಮತ್ತು ಮಗುವನ್ನು ರಕ್ಷಿಸಲು ತೀವ್ರ ಯತ್ನ ನಡೆಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮಗು ಕೊನೆಯುಸಿರೆಳೆದಿದೆ.
ನವೆಂಬರ್ 5ರಂದು ನಡೆಯಲಿದ್ದ ನಾಮಕರಣ ಸಮಾರಂಭದಲ್ಲಿ ಪಾಲ್ಗೊಳ್ಳಲು, ಬಾಲಕಿಯು ತನ್ನ ತಾಯಿ ರೆಹಾನಾ ಮತ್ತು ಅಜ್ಜಿ ಶಬೀನಾ ಬೇಗಂ ಅವರೊಂದಿಗೆ ಆ ಗ್ರಾಮಕ್ಕೆ ತೆರಳಿದ್ದಳು. ಕುಟುಂಬ ಸದಸ್ಯರ ಪ್ರಕಾರ, 70 ವರ್ಷದ ಸಂಬಂಧಿಕರೊಬ್ಬರು ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದರು. ಅವರು ಬುಧವಾರ ಸಂಜೆ ತಮ್ಮ ಕೋಣೆಯಲ್ಲಿದ್ದ ಬಾಟಲಿಯಿಂದ ಸಿರಪ್ ಸೇವಿಸಿದ್ದರು. ಆ ಬಾಟಲಿಯನ್ನು ಅಲ್ಲೇ ಇಡಲಾಗಿತ್ತು. ಮಾರನೇ ದಿನ ಮಗು ಆಟವಾಡುತ್ತಾ ಆ ಬಾಟಲಿ ತೆಗೆದು ನೆಕ್ಕಿದಾಗ ಸಿಹಿಯಾದ ರುಚಿ ಇಷ್ಟವಾಗಿ ಇಡೀ ಬಾಟಲಿ ಖಾಲಿ ಮಾಡಿದೆ.
ಹೀಗಾಗಿ, ಸಣ್ಣ ಮಕ್ಕಳಿರುವ ಮನೆಯಲ್ಲಿ ಯಾವುದೇ ರೀತಿಯ ಔಷಧಿಗಳು, ಸಿಹಿ ರುಚಿಯ ಸಿರಪ್ಗಳನ್ನು ಮಕ್ಕಳ ಕೈಗೆ ಎಟುಕದಂತೆ ಎತ್ತರದ ಹಾಗೂ ಸುರಕ್ಷಿತ ಜಾಗದಲ್ಲಿಡಬೇಕು. ಯಾವುದೇ ಕಾರಣಕ್ಕೂ ವೈದ್ಯರ ಚೀಟಿ ಮತ್ತು ನಿಗದಿತ ಪ್ರಮಾಣವಿಲ್ಲದೆ ಮಕ್ಕಳಿಗೆ ಸಿರಪ್ ಅಥವಾ ಮಾತ್ರೆಗಳನ್ನು ನೀಡಬಾರದು ಎಂದು ವೈದ್ಯಕೀಯ ತಜ್ಞರು ಮತ್ತೊಮ್ಮೆ ಎಚ್ಚರಿಸಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲೇ ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

