HomeCrimeಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಭೀಕರ ಹತ್ಯಾಕಾಂಡ: ಒಂದೇ ಕುಟುಂಬದ 7 ಜನರ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಭೀಕರ ಹತ್ಯಾಕಾಂಡ: ಒಂದೇ ಕುಟುಂಬದ 7 ಜನರ ಬರ್ಬರ ಹತ್ಯೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಭೀಕರ ಹತ್ಯಾಕಾಂಡವೊಂದು ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹ ಹಾಗೂ ಪತ್ನಿಯ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್ ಎಂಬಾತನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕ್ಯಾಬ್ ಚಾಲಕನಾಗಿರುವ ಇಂದುಶೇಖರ್ ಸಿನಿಮೀಯ ರೀತಿಯಲ್ಲಿ ಕುಟುಂಬದ ಸದಸ್ಯರನ್ನು ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿಕೊಂಡು ಒರಳುಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಎರಡು ದಿನಗಳ ಅವಧಿಯಲ್ಲಿ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

ಪತ್ನಿಯ ಮೇಲಿನ ಕೋಪಕ್ಕೆ ಇಡೀ ಕುಟುಂಬವೇ ಬಲಿ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಶೇಖರ್ ಸುಮಾರು 20 ವರ್ಷಗಳ ಹಿಂದೆ ಸುನಿತಾ ಎಂಬುವವರನ್ನು ವಿವಾಹವಾಗಿದ್ದ. ಆದರೆ ದಂಪತಿ ನಡುವೆ ಆಗಾಗ್ಗೆ ಕೌಟುಂಬಿಕ ಕಲಹ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ದೂರವಾಗಿದ್ದರು ಎನ್ನಲಾಗಿದೆ. ನಂತರ ಹಿರಿಯರು ಮಧ್ಯಸ್ಥಿಕೆ ವಹಿಸಿ ಸಂಧಾನ ನಡೆಸಿದ್ದರೂ ಕುಟುಂಬದೊಳಗಿನ ವೈಮನಸ್ಸು ಮುಂದುವರಿದಿತ್ತು ಎನ್ನಲಾಗಿದೆ.

ಪತ್ನಿಯ ಮೇಲಿನ ದ್ವೇಷ ಮತ್ತು ಕೌಟುಂಬಿಕ ಕಲಹವೇ ಈ ಭೀಕರ ಕೃತ್ಯಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಹತ್ಯೆಯ ಹಿಂದಿನ ನಿಖರ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಮನೆಗೆ ಒಬ್ಬೊಬ್ಬರನ್ನಾಗಿ ಕರೆಸಿ ಹತ್ಯೆ?

ಆರೋಪಿ ಇಂದು ಶೇಖರ್ ಕುಟುಂಬದ ಸದಸ್ಯರನ್ನು ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿಕೊಂಡು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ರಾಜಾಜಿನಗರದ ಭಾಷ್ಯಂ ಸರ್ಕಲ್ ಸಮೀಪದ ಮನೆಯೊಂದರಲ್ಲಿ ಈ ಭೀಕರ ಕೃತ್ಯ ನಡೆದಿರುವ ಮಾಹಿತಿ ಇದೆ.

ಒರಳುಕಲ್ಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ. ಎರಡು ದಿನಗಳ ಅವಧಿಯಲ್ಲಿ ಏಳು ಮಂದಿಯನ್ನು ಕೊಲೆ ಮಾಡಿ ಶವಗಳನ್ನು ಬೇರೆಡೆ ಎಸೆದಿರುವ ಆರೋಪ ಕೇಳಿಬಂದಿದೆ.

ಯಾರೆಲ್ಲ ಹತ್ಯೆಯಾಗಿದ್ದಾರೆ?

ಹತ್ಯೆಗೀಡಾದವರಲ್ಲಿ ಆರೋಪಿ ಇಂದು ಶೇಖರ್‌ನ ಪತ್ನಿ ಸುನಿತಾ, ಅತ್ತೆ ರೂಪಾವತಿ, ಭಾವಮೈದರಾದ ಶಿವಕುಮಾರ್ ಮತ್ತು ಶಂಕರ್, ಕುಟುಂಬದ ಸೊಸೆಯಂದಿರಾದ ದಿವ್ಯಾ ಹಾಗೂ ನಳಿನಿ ಮತ್ತು ಶಿವಕುಮಾರ್ ಅವರ ಪುತ್ರ ಪುನೀತ್ ಕೊಲೆಯಾಗಿದ್ದಾರೆ ಎನ್ನಲಾಗಿದೆ. ಹತ್ಯೆಯ ನಂತರ ಮೃತದೇಹಗಳನ್ನು ವಿಲೇವಾರಿ ಮಾಡುವ ಪ್ರಯತ್ನವೂ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಪತ್ನಿ ಸುನಿತಾಳನ್ನು ಕೊಲೆ ಮಾಡಿದ ಬಳಿಕ ನಂದಿ ಬೆಟ್ಟದ ಸಮೀಪ ಶವವನ್ನು ಎಸೆದಿರುವುದಾಗಿಯೂ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಪೊಲೀಸರು ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪೊಲೀಸರಿಂದ ತನಿಖೆ ಚುರುಕು

ಕುಟುಂಬದ ಸದಸ್ಯರ ನಾಪತ್ತೆಯಾದ ಬಗ್ಗೆ ನಳಿನಿ ಅವರ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೊಂಡಿದ್ದರು. ಹಾಗೂ ಬಾಲಕ ಪುನೀತ್ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮೃತರ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ರಾಜಾಜಿನಗರ ಠಾಣೆ ಪೊಲೀಸರು ಆರೋಪಿ ಇಂದುಶೇಖರ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಒಂದೇ ಕುಟುಂಬದ ಏಳು ಮಂದಿ ಹತ್ಯೆಯಾಗಿರುವ ಘಟನೆ ಬೆಂಗಳೂರಿನಲ್ಲಿ ತೀವ್ರ ಆಘಾತ ಮೂಡಿಸಿದೆ. ಈ ಕುರಿತಾಗಿ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಸೂಚನೆ: ಲಭ್ಯವಿರುವ ಮಾಹಿತಿ ಆಧರಿಸಿ ಇದನ್ನು ಸುದ್ದಿ ರೂಪದಲ್ಲಿ ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular