ಬೆಂಗಳೂರು: ಉಳಿಕೆ ಮೂಲ ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಗಳ ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪ್ರಕಟಿಸಿದೆ.
ಕಾರಾಗೃಹ ಇಲಾಖೆಯ ವಾರ್ಡರ್ ಕಮ್ ನರ್ಸಿಂಗ್, ವಾರ್ಡರ್, ದ್ವಿತೀಯ ದರ್ಜೆ ಬೋಧಕರು ಗ್ರೇಡ್-2 ಹುದ್ದೆಗಳಿಗೆ ನ.20ರಂದು ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
ಕಾರಾಗೃಹ ಇಲಾಖೆಯ ವಾರ್ಡರ್, ದ್ವಿತೀಯ ದರ್ಜೆ ಬೋಧಕರು ಗ್ರೇಡ್ -2 ಒಟ್ಟು 576 ಹುದ್ದೆಗಳಿಗೆ ನ.21ರಂದು ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಲಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲಾ ಶಿಕ್ಷಕರ 767 ಹುದ್ದೆಗಳಿಗೆ ನ.22ರಿಂದ 30ರವರೆಗೆ ವಿವಿಧ ವಿಷಯಗಳ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈ ದಿನಾಂಕಗಳಂದು ನಡೆಯುವ ಪರೀಕ್ಷೆಗಳಿಗೆ ಈಗಿನಿಂದಲೇ ತಯಾರಿ ಮಾಡಿಕೊಂಡು ಪರೀಕ್ಷೆ ಬರೆಯಲು ಕೋರಲಾಗಿದೆ.
ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಉಳಿಕೆ ಮೂಲ ವೃಂದ(RPC) ಅಡಿಯಲ್ಲಿ ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2026ರ ನವೆಂಬರ್ 20ರಿಂದ ನವೆಂಬರ್ 30ರವರೆಗೆ ವಿವಿಧ ಹಂತಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಗಮನಿಸುವಂತೆ ಪ್ರಾಧಿಕಾರ ಸೂಚಿಸಿದೆ.
ಕೆಇಎ ನವೆಂಬರ್ 5ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಕಾರಾಗೃಹ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ನ.20 ರಂದು ಕಾರಾಗೃಹ ಇಲಾಖೆ – ವಾರ್ಡರ್ ಕಮ್ ನರ್ಸಿಂಗ್, ವಾರ್ಡರ್(ವೀಕ್ಷಕರು), ದ್ವಿತೀಯ ದರ್ಜೆ ಬೋಧಕರು ಗ್ರೇಡ್-2 ಹಾಗೂ ಕೆಇಎ ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆ
ನ.21 ರಂದು ಕಾರಾಗೃಹ ಇಲಾಖೆ – ವಾರ್ಡರ್(ವೀಕ್ಷಕರು), ದ್ವಿತೀಯ ದರ್ಜೆ ಬೋಧಕರು ಗ್ರೇಡ್-2 ಸಾಮಾನ್ಯ ಜ್ಞಾನ ಪತ್ರಿಕೆ
ನ.22 ರಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಾಮಾನ್ಯ ಜ್ಞಾನ ಪತ್ರಿಕೆ-1 ಹಾಗೂ ಕನ್ನಡ ಮತ್ತು ವಿಜ್ಞಾನ ನಿರ್ದಿಷ್ಟ ಪತ್ರಿಕೆ-2
ನ.27 ರಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ – ಗಣಕಯಂತ್ರ ಶಿಕ್ಷಕರು, ಹಿಂದಿ ಮತ್ತು ಗಣಿತ ವಿಷಯಗಳ ಹುದ್ದೆಗಳು ನಿರ್ದಿಷ್ಟ ಪತ್ರಿಕೆ-2
ನ.29 ರಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ – ಇಂಗ್ಲಿಷ್ ಮತ್ತು ದೈಹಿಕ ಶಿಕ್ಷಣ ನಿರ್ದಿಷ್ಟ ಪತ್ರಿಕೆ-2
ನ.30 ರಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ – ಸಮಾಜ ವಿಜ್ಞಾನ ನಿರ್ದಿಷ್ಟ ಪತ್ರಿಕೆ-2
ಪರೀಕ್ಷಾ ಸಮಯ ಮತ್ತು ಅಂಕಗಳು
* ನವೆಂಬರ್ 20ರಂದು ಕನ್ನಡ ಭಾಷಾ ಪರೀಕ್ಷೆ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ನಡೆಯಲಿದೆ. ಒಟ್ಟು 150 ಅಂಕಗಳು.
* ನವೆಂಬರ್ 21ರಂದು ಸಾಮಾನ್ಯ ಜ್ಞಾನ ಪರೀಕ್ಷೆ ಮಧ್ಯಾಹ್ನ 3ರಿಂದ ಸಂಜೆ 4.30ರವರೆಗೆ ನಡೆಯಲಿದ್ದು, 100 ಅಂಕಗಳಿಗೆ ಪರೀಕ್ಷೆ ಇರಲಿದೆ.
* ನವೆಂಬರ್ 22ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ.
* ನವೆಂಬರ್ 27 ಮತ್ತು 29ರಂದು ಬೆಳಗ್ಗೆ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ವಿಷಯವಾರು ಪರೀಕ್ಷೆಗಳು ನಡೆಯಲಿವೆ.
* ನವೆಂಬರ್ 30ರಂದು ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳಿಗೆ ಕೆಇಎ ಮಹತ್ವದ ಸೂಚನೆಗಳು
ಪರೀಕ್ಷಾ ಕೇಂದ್ರಕ್ಕೆ ಎರಡು ಗಂಟೆ ಮುಂಚಿತವಾಗಿ ಹಾಜರಾಗಬೇಕು
ಪರೀಕ್ಷಾ ಕೇಂದ್ರದಲ್ಲಿ ಫ್ರಿಸ್ಕಿಂಗ್ (ತಪಾಸಣೆ) ಮತ್ತು ಮುಖಚಹರೆ ಪರಿಶೀಲನೆ ನಡೆಸಿದ ಬಳಿಕವೇ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಪರೀಕ್ಷೆ ಆರಂಭವಾಗುವ ಸಮಯಕ್ಕಿಂತ ಎರಡು ಗಂಟೆ ಮುಂಚಿತವಾಗಿ ಕೇಂದ್ರದೊಳಗೆ ಹಾಜರಿರಬೇಕು.
ತಪ್ಪು ಉತ್ತರಕ್ಕೆ ಋಣಾತ್ಮಕ ಮೌಲ್ಯಮಾಪನ
ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ ಜಾರಿಯಲ್ಲಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ನಿಗದಿತ ಅಂಕಗಳ ಶೇ.25ರಷ್ಟು ಅಂದರೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಉತ್ತರಿಸದ ಪ್ರಶ್ನೆಗಳಿಗೆ ಐದನೇ ಆಯ್ಕೆ ಕಡ್ಡಾಯ
ಉತ್ತರಿಸದೇ ಉಳಿದ ಪ್ರಶ್ನೆಗಳಿಗೆ ಐದನೇ ಆಯ್ಕೆ ಅಥವಾ ವೃತ್ತವನ್ನು ಶೇಡ್ ಮಾಡಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ ಐದು ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಯಾವುದೇ ಆಯ್ಕೆ ಅಥವಾ ವೃತ್ತವನ್ನು ಶೇಡ್ ಮಾಡದಿದ್ದರೆ ಅಂತಹ ಪ್ರಶ್ನೆಗೆ 0.25 ಅಂಕ ಕಡಿತಗೊಳಿಸಲಾಗುತ್ತದೆ.
ಕನ್ನಡ ಭಾಷಾ ಪರೀಕ್ಷೆಗೆ ಋಣಾತ್ಮಕ ಮೌಲ್ಯಮಾಪನವಿಲ್ಲ
ಕನ್ನಡ ಭಾಷಾ ಪರೀಕ್ಷೆಗೆ ಮಾತ್ರ ಋಣಾತ್ಮಕ ಮೌಲ್ಯಮಾಪನ ಅನ್ವಯಿಸುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಈ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಮತ್ತು ಪರೀಕ್ಷಾ ಪ್ರವೇಶ ಪತ್ರದಲ್ಲಿನ ಸೂಚನೆಗಳನ್ನು ಪರಿಶೀಲಿಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

