ಚಿತ್ರರಂಗದ ಲೇಡಿ ಸೂಪರ್ಸ್ಟಾರ್ ನಯನತಾರಾ ಅಭಿನಯದ ‘ಮಹಾಶಕ್ತಿ’ ಸಿನಿಮಾ ನಾಳೆ ಅಂದರೆ ನವೆಂಬರ್ 6 ರಂದು ತೆರೆಗೆ ಬರಲು ಸಜ್ಜಾಗಿದೆ. ತಮಿಳಿನ ಸೂಪರ್ ಹಿಟ್ ‘ಮೂಕುತಿ ಅಮ್ಮನ್ 2’ ಚಿತ್ರದ ತೆಲುಗು ಅವತರಣಿಕೆಯಾಗಿರುವ ಈ ಭಕ್ತಿಪ್ರಧಾನ ಫ್ಯಾಂಟಸಿ ಡ್ರಾಮಾವನ್ನು ಖ್ಯಾತ ನಿರ್ದೇಶಕ ಸುಂದರ್ ಸಿ ನಿರ್ದೇಶಿಸಿದ್ದಾರೆ. ಆದರೆ ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರ ತೆಲುಗು ಚಿತ್ರರಂಗದಲ್ಲಿ ನಿರೀಕ್ಷಿತ ಮಟ್ಟದ ಹೈಪ್ ಅಥವಾ ಕ್ರೇಜ್ ಸೃಷ್ಟಿಸುವಲ್ಲಿ ವಿಫಲವಾಗಿದೆ.
ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ನಯನತಾರಾ ಅವರ ಐದನೇ ಸಿನಿಮಾ ಇದಾಗಿದ್ದರೂ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಚಿತ್ರದ ಮುಂಗಡ ಬುಕಿಂಗ್ ಹಾಗೂ ಪ್ರಚಾರ ಕಾರ್ಯಕ್ರಮಗಳು ತೀರಾ ಸಾಧಾರಣ ಮಟ್ಟದಲ್ಲಿವೆ. ಹೀಗಾಗಿ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಬೇಕಾದರೆ ಸಂಪೂರ್ಣವಾಗಿ ಥಿಯೇಟರ್ಗೆ ಬರುವ ವೀಕ್ಷಕರ ಧನಾತ್ಮಕ ವಿಮರ್ಶೆ ಮತ್ತು ಅಭಿಪ್ರಾಯವನ್ನೇ ನೆಚ್ಚಿಕೊಳ್ಳಬೇಕಾಗಿದೆ.
ಮತ್ತೊಂದೆಡೆ ಚಿತ್ರಮಂದಿರಗಳಲ್ಲಿ ಬೃಹತ್ ಬಜೆಟ್ನ ‘ರಾಮಾಯಣ’ ಹಾಗೂ ‘ಸೀನ್’ ಸಿನಿಮಾಗಳು ತೆರೆಕಂಡು ಪ್ರದರ್ಶನ ಕಾಣುತ್ತಿರುವುದು ಮಹಾಶಕ್ತಿ ಚಿತ್ರಕ್ಕೆ ದೊಡ್ಡ ಮಟ್ಟದ ಪೈಪೋಟಿ ಒಡ್ಡಿದೆ. ಈ ಕಠಿಣ ಸ್ಪರ್ಧೆಯ ನಡುವೆ ಚಿತ್ರಕ್ಕೆ ಒಳ್ಳೆಯ ಮಾತುಗಳು ಕೇಳಿಬಂದರೆ ಮಾತ್ರ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ಸಾಧ್ಯವಾಗಲಿದೆ.
ವೇಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಹಾಗೂ ರೌಡಿ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ರೇಜಿನಾ ಕೆಸಂಡ್ರ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕನ್ನಡದ ನಟ ದುನಿಯಾ ವಿಜಯ್, ಯೋಗಿ ಬಾಬು, ಉರ್ವಶಿ, ಅಜಯ್ ಘೋಷ್ ಹಾಗೂ ಅಭಿನಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

