ಶಿವಮೊಗ್ಗ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಚುನಾವಣಾ ವ್ಯವಸ್ಥೆಯ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡಿಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರನ್ನು ಗುರುತಿಸಿ ಪರಿಷ್ಕರಣೆ ಮಾಡುವುದು ಅಗತ್ಯ. ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಉಳಿಯಬೇಕು. ಈ ಉದ್ದೇಶದಿಂದ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.
ಮತದಾರರ ಪಟ್ಟಿಯಿಂದ ಮುಸ್ಲಿಮರು, ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದವರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಧರ್ಮ, ಜಾತಿ ಅಥವಾ ಆರ್ಥಿಕ ಸ್ಥಿತಿಯನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ಗೆದ್ದಾಗ ಇವಿಎಂ ಹಾಗೂ ಚುನಾವಣಾ ಆಯೋಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸದ ಕಾಂಗ್ರೆಸ್, ಸೋತಾಗ ಮಾತ್ರ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸುತ್ತಿದೆ. ಕರ್ನಾಟಕದಲ್ಲಿಯೂ ಇವಿಎಂ ಮೂಲಕವೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹಾಗಾದರೆ ಈಗ ಇವಿಎಂ ಬಗ್ಗೆ ಆಕ್ಷೇಪವೇಕೆ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಬ್ಯಾಲೆಟ್ ಪೇಪರ್ ಮೂಲಕ ನಡೆದಿದ್ದರೂ ಕಾಂಗ್ರೆಸ್ ಸೋಲು ಅನುಭವಿಸಿದೆ. ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳುವ ಮನೋಭಾವ ಪಕ್ಷಕ್ಕೆ ಇರಬೇಕು ಎಂದರು.
ಎಸ್ಐಆರ್ ಪ್ರಕ್ರಿಯೆ ಆರಂಭವಾದ ಸಂದರ್ಭದಲ್ಲಿ ರಾಷ್ಟ್ರಭಕ್ತ ಬಳಗದಿಂದಲೂ ಮೂರ್ನಾಲ್ಕು ಕಡೆ ಸಹಾಯ ಕೇಂದ್ರಗಳನ್ನು ತೆರೆಯಲಾಗಿತ್ತು. ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗಿರುವ ಅರ್ಹರ ಹೆಸರುಗಳನ್ನು ಸೇರ್ಪಡೆಗೊಳಿಸಲು ಹಾಗೂ ಅನರ್ಹ ಹೆಸರುಗಳನ್ನು ಗುರುತಿಸಲು ಸಹಕರಿಸಿದ್ದಾರೆ. ಈ ಕಾರ್ಯದಲ್ಲಿ ತೊಡಗಿರುವ ಚುನಾವಣಾ ಆಯೋಗದ ಅಧಿಕಾರಿಗಳು, ಸಿಬ್ಬಂದಿ ಮತ್ತು ಬೂತ್ ಮಟ್ಟದ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಹಾಲಿನ ದರ ಏರಿಕೆ ಹಣದ ಲೆಕ್ಕ ಬಹಿರಂಗಪಡಿಸಿ
ಹಾಲಿನ ದರ ಏರಿಕೆಯಿಂದ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ನೀಲಿ ಪ್ಯಾಕೆಟ್ ಹಾಲಿನ ದರ 8 ರೂ. ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ಆರೆಂಜ್ ಮತ್ತು ಗ್ರೀನ್ ಪ್ಯಾಕೆಟ್ ಹಾಲಿನ ದರ 12 ರೂ. ಹೆಚ್ಚಿಸಲಾಗಿದೆ. ಇದರಲ್ಲಿ 7 ರೂ. ರೈತರಿಗೆ, 1 ರೂ. ಕೆಎಂಎಫ್ ನೀಡುವುದಾಗಿ ಹೇಳಿದ್ದು, ಉಳಿದ 4 ರೂ. ಹಣ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಮಾಜಿ ಮೇಯರ್ ಸುವರ್ಣ ಶಂಕರ್ ಒತ್ತಾಯಿಸಿದರು.
ಪ್ರತಿದಿನ ಕೆಎಂಎಫ್ಗೆ 1.28 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಪ್ರತಿ ಲೀಟರ್ಗೆ 4ರಂತೆ ಲೆಕ್ಕ ಹಾಕಿದರೆ ವರ್ಷಕ್ಕೆ ಸುಮಾರು 1,869 ಕೋಟಿ ರೂ. ಆಗುತ್ತದೆ. ಈ ಹಣದ ಲೆಕ್ಕವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದರು.
ಬೆಲೆ ಏರಿಕೆ ಖಂಡಿಸಿ ನ.6ರಂದು ಪ್ರತಿಭಟನೆ
’ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ಆಡಳಿತ ವೈಖರಿ ಖಂಡಿಸಿ ರಾಷ್ಟ್ರಭಕ್ತರ ಬಳಗದ ಮಹಿಳಾ ಘಟಕದ ವತಿಯಿಂದ ನ. 6ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ಅಧ್ಯಕ್ಷೆ ಕೆಂಪಮ್ಮ ತಿಳಿಸಿದರು.
ದೈವಜ್ಞ ಕಲ್ಯಾಣ ಮಂದಿರದಿಂದ ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಮೆರವಣಿಗೆ ದುರ್ಗಿಗುಡಿ ಮುಖ್ಯರಸ್ತೆ ಮೂಲಕ ಗೋಪಿವೃತ್ತ ತಲುಪಲಿದೆ. ಅಲ್ಲಿ ಸಭೆ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನೆ ದಾಖಲಿಸಲಾಗುವುದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್, ಹಾಲು, ಬಸ್ ಪ್ರಯಾಣ, ಮದ್ಯ ಹಾಗೂ ಆಸ್ತಿ ನೋಂದಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬೆಲೆ ಏರಿಕೆಯಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಿದೆ. ವಿಶೇಷವಾಗಿ ಹಾಲು ಮತ್ತು ಮೊಸರಿನ ದರ ಹೆಚ್ಚಳದಿಂದ ಮಹಿಳೆಯರು ಹಾಗೂ ಮಕ್ಕಳಿರುವ ಕುಟುಂಬಗಳಿಗೆ ಹೆಚ್ಚಿನ ಹೊರೆ ಉಂಟಾಗಿದೆ ಎಂದು ದೂರಿದರು.
ಮಹಾನಗರ ಪಾಲಿಕೆ ಮಾಜಿ ಮೇಯರ್ ಲತಾ ಗಣೇಶ್, ಮಾಜಿ ಉಪಮೇಯರ್ ಲಕ್ಷ್ಮಿ ಶಂಕರ್ ನಾಯಕ್, ಮಾಜಿ ಕಾರ್ಪೊರೇಟರ್ ಅನಿತಾ ಮಂಜುನಾಥ್, ಸೀತಾಲಕ್ಷ್ಮಿ, ಸುರೇಖಮ್ಮ, ಗೀತಮ್ಮ, ಶಶಿಕಲಾ, ಜ್ಯೋತಿ, ಶಂಕರ್ ನಾಯಕ್, ರಾಜಯ್ಯ ಮತ್ತಿತರರು ಇದ್ದರು.

